ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಪ್ರವಾಸಿ ತಾಣವಾದ ಗೋವಾದ ಮಡಗಾಂವ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ಹಿಂದೂ ಬಲಪಂಥೀಯ ಸಂಘಟನೆಯೊಂದರ 11 ಕಾರ್ಯಕರ್ತರ ವಿರುದ್ಧ ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ, ಈ ಸಂಘಟನೆಯನ್ನು ಆರೋಪ ಪಟ್ಟಿಯಿಂದ ಕೈ ಬಿಟ್ಟಿದ್ದು, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಉನ್ನತ ಅಧಿಕಾರಿಗಳು, ಸಂಚಿನಲ್ಲಿ ಸಂಘಟನೆ ಭಾಗಿಯಾಗಿಲ್ಲ ಎಂದು ವಿವರಿಸಿದ್ದಾರೆ. ಆರೋಪ ಪಟ್ಟಿಯಲ್ಲಿ ಹೆಸರಿಸಿರುವ ಎಲ್ಲ 11 ಮಂದಿ ಸನಾತನ ಸಂಸ್ಥಾ ಸಂಘಟನೆಯ ಸದಸ್ಯರಾಗಿದ್ದಾರೆ. ಇವರು ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ಹಲವು ಸ್ಫೋಟ ಪ್ರಕರಣಗಳೊಂದಿಗೂ ಸಂಬಂಧ ಹೊಂದಿದ್ದಾರೆನ್ನಲಾಗಿದೆ. ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದರು.
ಇವರೆಲ್ಲರ ವಿರುದ್ಧ ಸ್ಫೋಟಕ ವಸ್ತುಗಳ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದು ಸುಮಾರು 3000ಪುಟಗಳ ಆರೋಪ ಪಟ್ಟಿಯನ್ನು ಸೆಷನ್ಸ್ ನ್ಯಾಯಾಧೀಶ ಯು.ವಿ.ಬಕ್ರೆ ಅವರಿಗೆ ಸಲ್ಲಿಸಲಾಗಿದೆ. ಅಲ್ಲದೇ ಸ್ಫೋಟದಲ್ಲಿ ಮೃತಪಟ್ಟ ಸನಾತನ ಸಂಸ್ಥಾದ ಮಾಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯ್ಕ್ ಅವರನ್ನೂ ಇತರ ಆರೋಪಿಗಳಾಗಿ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಪ್ರಕರಣ ಬಗ್ಗೆ ಸ್ಥಳೀಯ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಮಾರು 250 ಮಂದಿ ಸಾಕ್ಷಿದಾರರು ಸಾಕ್ಷಿ ನುಡಿದಿದ್ದು, ಅವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಸನಾತನ ಸಂಸ್ಥಾದ ವಿನಯ ತಾಲೇಲ್‌ಕರ್, ವಿನಾಯಕ ಪಾಟೀಲ್, ಧನಂಜಯ್ ಅಶ್ತೆಕರ್ ಇವರೆಲ್ಲ ಗೋವಾ ನಿವಾಸಿಗಳು. ಮಹಾರಾಷ್ಟ್ರ ನಿವಾಸಿ ದಿಲೀಪ್ ಮಂಗೋನ್‌ಕರ್ ಹೆಸರಿಸಿದ್ದು, ಇವರೆಲ್ಲ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇನ್ನುಳಿದಂತೆ ಮಹಾರಾಷ್ಟ್ರ ನಿವಾಸಿಗಳಾದ ಪ್ರಶಾಂತ್ ಜುವೆಕಾರ್, ಸಾರಂಗ್ ಅಕೋಲ್ಕಾರ್, ಜಯಪ್ರಕಾಶ್, ರುದ್ರಾ ಪಾಟೀಲ್ ಮತ್ತು ಪ್ರಶಾಂತ್ ಅಶ್ತೆಕರ್ ಹೆಸರು ಆರೋಪ ಪಟ್ಟಿಯಲ್ಲಿದ್ದು, ಇವರೆಲ್ಲಾ ನಾಪತ್ತೆಯಾಗಿದ್ದಾರೆ.