ಸುಳ್ಳು ಹೇಳೋದು ಯಾರು ಹೆಚ್ಚು? ಗಂಡಸರೋ, ಹೆಂಗಸರೋ...? ಗಂಡಸರೆಲ್ಲ, ಹೆಂಗಸರೇ ಹೆಚ್ಚು ಸುಳ್ಳು ಹೇಳ್ತಾರೆ ಎಂದು ದೂರಿದರೆ, ಹೆಂಗಸರೆಲ್ಲ ಗಂಡಸರಂತೂ ಮಾತು ಮಾತಿಗೆ ಸುಳ್ಳೇ ಹೇಳ್ತಿರ್ತಾರೆ ಎಂದು ದೂರುತ್ತಾರೆ. ಅದೇನೇ ಇರಲಿ, ಬಿಡಿ. ಈಗ ಆ ವಾಗ್ವಾದಕ್ಕೆ ಅಂತ್ಯ ಬಿದ್ದಿದೆ. ಹೊಸತೊಂದು ಸಮೀಕ್ಷೆಯ ಪ್ರಕಾರ ಗಂಡಸರೇ ಹೆಂಗಸರಿಗಿಂತ ಹೆಚ್ಚು ಸುಳ್ಳು ಹೇಳ್ತಾರೆ ಎಂದು ಅಧಿಕೃತವಾಗಿ ಸಾಬೀತಾಗಿದೆ.
ಹೌದು. ಸಮೀಕ್ಷೆಯ ಪ್ರಕಾರ ಗಂಡಸರು ದಿನಕ್ಕೆ ಮೂರು ಸುಳ್ಳು ಹೇಳುತ್ತಾರೆ! ವರ್ಷಕ್ಕೆ 1,092 ಸುಳ್ಳುಗಳನ್ನು ಗಂಡಸೊಬ್ಬನೇ ಹೇಳುತ್ತಾನೆ. ಆದರೆ ಪ್ರತಿ ಹೆಂಗಸೊಬ್ಬಳು ವರ್ಷಕ್ಕೆ ಕೇವಲ 728 ಸುಳ್ಳು ಹೇಳುತ್ತಾಳೆ!
ಲಂಡನ್ ಸೈನ್ಸ್ ಮ್ಯೂಸಿಯಂ ನಡೆಸಿದ ಸಮೀಕ್ಷೆಯ ಪ್ರಕಾರ, ಗಂಡಸರೇ ಅತಿ ಹೆಚ್ಚು ಸುಳ್ಳು ಹೇಳುತ್ತಾರೆ. ದಿನಕ್ಕೆ ಸರಸರಿ ಮೂರು ಸುಳ್ಳುಗಳನ್ನು ಹೇಳುವ ಗಂಡಸರ ಪೈಕಿ ಶೇ.70ರಷ್ಟು ಮಂದಿ ಸುಳ್ಳು ಹೇಳಿದ ಮೇಲೆ ತಮಗೆ ತಾವು ಸುಳ್ಳು ಹೇಳಬಾರದಿತ್ತೆಂಬ ಪಶ್ಚಾತ್ತಾಪವಾಗುತ್ತದಂತೆ. ಇನ್ನು ಹೆಂಗಸರ ಪೈಕಿ ಶೇ.82 ಮಂದಿ ತಾವು ಯಾವುದೇ ಉದ್ದೇಶವಿಲ್ಲದೆ ಸುಳ್ಳು ಹೇಳಿರುತ್ತೇವೆ ಎಂದು ಒಪ್ಪಿಕೊಳ್ಳುತ್ತಾರೆ.
ಸುಳ್ಳು ಹೇಳುವುದು ಮನುಷ್ಯ ಸ್ವಭಾವ ಗುಣವಾಗಿದ್ದು, ಸಾಮಾಜಿಕ ಸಂವಹನದ ಸಂದರ್ಭ ಸುಳ್ಳು ಹೇಳುವುದು ತುಂಬಾ ಸಾಮಾನ್ಯವಾಗಿದೆ ಎಂದಿರುವ ಸಮೀಕ್ಷೆ, ಗಂಡಸರೇ ಹೆಚ್ಚು ಸುಳ್ಳುಗಳನ್ನು ಹೇಳುತ್ತಾರೆ ಎಂದಿದೆ. ಇದೀಗ ಸುಳ್ಳು ಹೇಳುವ ಬಗ್ಗೆ ಇದೀಗ ಸಂಸೋಧನೆಯೂ ನಡೆಯುತ್ತಿದ್ದು, ಸುಳ್ಳು ಹೇಳಲು ಕಾರಣವಾಗುವ ವಂಶವಾಹಿಗಳ ಪತ್ತೆ ಕಾರ್ಯವೂ ನಡೆಯುತ್ತಿದೆ.
ಅಂದಹಾಗೆ, ಗಂಡಸರು ಯಾವ ಸಂದರ್ಭಗಳಲ್ಲಿ ಎಂಥಾ ಸುಳ್ಳುಗಳನ್ನು ಹೆಚ್ಚು ಹೇಳುತ್ತಾರೆ ಎಂಬ ಸಮೀಕ್ಷೆಯ ಪ್ರಶ್ನೆಗೆ ಸಿಕ್ಕ ಉತ್ತರವೂ ಕೂಡಾ ಅಷ್ಟೇ ಇಂಟರೆಸ್ಟಿಂಗ್ ಆಗಿದೆ. ಗಂಡಸರು ತಮ್ಮ ಹೆಂಡತಿಯರಲ್ಲಿ, ಸಂಗಾತಿಗಳಲ್ಲಿ ಹೆಚ್ಚು ಸುಳ್ಳು ಹೇಳುತ್ತಾರೆ. ಪ್ರತಿ ದಿನವೂ 'ಡಾರ್ಲಿಂಗ್, ಸಿಗ್ನಲ್ ಇರ್ಲಿಲ್ಲ ಕಣೇ', 'ಟ್ರಾಫಿಕ್ಕಲ್ಲಿದ್ದೇನೆ', 'ಸಾರಿ, ನನಗೆ ನೀನು ಕಾಲ್ ಮಾಡಿದ್ದು ಗೊತ್ತೇ ಆಗ್ಲಿಲ್ಲ ಮೀಟಿಂಗಲ್ಲಿದ್ದೆ', 'ನೀನೀಗ ತೆಳ್ಳಗಾಗಿದ್ದಿ', 'ಯಾವಾಗಲೂ ನನಗೇನು ಬೇಕೆನಿಸುತ್ತೋ ಅದನ್ನೇ ಮಾಡಿದ್ದಿ'.. ಎಂಬ ಸುಳ್ಳುಳನ್ನೇ ಹೇಳುತ್ತಿರುತ್ತಾರಂತೆ!