ಮುಸ್ಲಿಮ್ ಮಹಿಳೆಯರ ಕೆಲಸಕ್ಕೆ ಹೋಗುವುದು, ಇನ್ಸೂರೆನ್ಸ್ ಪಾಲಿಸಿ ಮಾಡಿಸುವುದು, ಹುಟ್ಟುಹಬ್ಬ ಆಚರಿಸುವುದು ಇಸ್ಲಾಂಗೆ ವಿರುದ್ಧ ಎಂದು ಫತ್ವಾ ಹೊರಡಿಸಿದ್ದ ಇಸ್ಲಾಮ್ ಧಾರ್ಮಿಕ ಸಂಘಟನೆಯಾದ ದಾರುಲ್ ಉಲೂಮ್ ದಿಯೋಬಂದ್ ಇದೀಗ ಮತ್ತೊಂದು ಹೇಳಿಕೆ ನೀಡಿದೆ. ಶಿಕ್ಷಣ ಎಂಬುದು ಮುಸ್ಲಿ ಮಹಿಳೆಯಾಗಲಿ, ಪುರುಷರಾಗಲಿ, ಇಬ್ಬರಿಗೂ ಎಷ್ಟು ಪ್ರಾಮುಖ್ಯವೋ ಅಷ್ಟೇ ಕಡ್ಡಾಯ ಕೂಡಾ ಎಂದಿದೆ.
ದಾರೂಲ್ ಉಲೂಮ್ ನ ಮೌಲಾನಾ ಖಾಲಿದ್ ರಶೀದ್ ಅವರು ಸಮೆನಾರೊಂದರಲ್ಲಿ ಮಾತನಾಡುತ್ತಾ, ಹದೀಸ್ ಹಾಗೂ ಶರಿಯತ್‌ಗಳನ್ನು ಉಲ್ಲೇಖಿಸುತ್ತಾ ಶಿಕ್ಷಣದ ಅಗತ್ಯವನ್ನು ಮುಸ್ಲಿಂ ಅಲ್ಲಗಳೆದಿಲ್ಲ. ಯಾವುದೇ ಮುಸ್ಲಿಂ ಮಹಿಳೆಯಾಗಲಿ ಪುರುಷನಾಗಲಿ, ಶಿಕ್ಷಣವೆಂಬುದು ತುಂಬಾ ಅಗತ್ಯ. ಅಷ್ಟೇ ಅಲ್ಲ ಕಡ್ಡಾಯ ಕೂಡಾ ಎಂದರು.
ಹುಮಾ ಖವಾಜಾ ಅವರು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣದ ಪ್ರಸ್ತುತತೆ ಕುರಿತು ಎತ್ತಿದ ಸಂಶಯಕ್ಕೆ ಉತ್ತರ ನೀಡುತ್ತಾ ಈ ಹೊಸ ಫತ್ವಾ ಹೊರಡಿಸಲಾಗಿದೆ. ಫತ್ವಾದಲ್ಲಿ ವಿವರಿಸಿರುವಂತೆ, ಮುಸ್ಲಿಂ ಸಂಪ್ರದಾಯದಲ್ಲಿ ಶಿಕ್ಷಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಪುರುಷನೊಬ್ಬ ತನ್ನ ಮಗಳಿಗೆ ಅಥವಾ ಅಕ್ಕತಂಗಿಯರಿಗೆ ಹೆಚ್ಚಿನ ಶಿಕ್ಷಣ ಕೊಡಿಸಿದರೆ, ಅವರ ಮುಂದಿನ ಜೀವನ ಕ್ರಮಬದ್ಧವಾಗಿರುತ್ತದೆ. ಜೀವನ ಶ್ರುತಿ ಕಳೆದುಕೊಂಡರೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕೂಡಾ ಆಕೆಗೆ ಶಿಕ್ಷಣ ನೆರವಾಗುತ್ತದೆ. ಆಖೆಗೆ ಯೋಚಿಸುವ ಶಕ್ತಿ, ಬದುಕುವ ಧೈರ್ಯ ನೀಡುತ್ತದೆ. ಜೊತೆಗೆ ತನ್ನ ಮಕ್ಕಳಿಗೆ ಆಕೆ ಮೊದಲ ಪಾಠವನ್ನೂ ನೀಡುತ್ತಾಳೆ. ಅವರನ್ನೂ ಸುಶಿಕ್ಷಿತರನ್ನಾಗಿಸುತ್ತಾಳೆ. ಮಹಿಳೆಗೆ ಶಿಕ್ಷಣ ನೀಡುವುದು ಸಾಮಾಜಿಕ ಸುಧಾರಣೆಗೆ ಮೂಲ. ಹಾಗಾಗಿ ಮಹಿಳೆಯೊಬ್ಬಳಿಗೆ ಓದಿಸುವುದು ಕಡ್ಡಾಯ ಎಂದರು.
ಆದರೆ ಮುಸ್ಲಿಂ ಜಗತ್ತಿನಲ್ಲಿ ಜನರು ಸಾಕ್ಷರರಾಗಿರುವುದೇ ಕಡಿಮೆ. ಇದೇ ಕಾರಣದಿಂದ ಅವರ ಮಕ್ಕಳೂ ಕೂಡಾ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ ಎಂದು ಅವರು ಫತ್ವಾದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಈ ಹಿಂದೆ ಇದೇ ದಾರುಲ್ ಉಲೂಮ್ ದಿಯೋಬಂದ್ ಮುಸ್ಲಿಮ್ ಮಹಿಳೆಯರು ಕೆಲಸಕ್ಕೆ ಹೋಗುವುದು, ಇನ್ಸೂರೆನ್ಸ್ ಪಾಲಿಸಿ ಮಾಡಿಸುವುದು, ಹುಟ್ಟುಹಬ್ಬ ಆಚರಿಸುವುದು ಇಸ್ಲಾಂ ಧರ್ಮಕ್ಕೆ ವಿರುದ್ಧದವಾದದ್ದು ಎಂದು ಹೇಳಿತ್ತು. ಕೆಲಸಕ್ಕೆ ಹೋಗುವ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿಗೊಳಿಸಿ, ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ತಿಳಿಸಿತ್ತು. ಪುರುಷರು ಮತ್ತು ಮಹಿಳೆಯರು ಜತೆಯಾಗಿ ಕೆಲಸ ಮಾಡುವ ಮತ್ತು ಮುಖ ಪರದೆಯಿಲ್ಲದೆ ಪುರುಷರ ಜತೆ ಮಾತನಾಡಲು ಅವಕಾಶ ಮಾಡಿಕೊಡುವ ಖಾಸಗಿ ಅಥವಾ ಸರಕಾರಿ ಕೆಲಸಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಫತ್ವಾದಲ್ಲಿ ಸೂಚಿಸಲಾಗಿತ್ತು.