ಜರಗ್ರಾಮ್ (ಪಶ್ಚಿಮ ಬಂಗಾಳ), ಬುಧವಾರ, 19 ಮೇ 2010( 11:17 IST )
ನಕ್ಸಲರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಈಗಾಗಲೇ ದಾಂತೆವಾಡದಲ್ಲಿ ಹಲವರನ್ನು ಆಹುತಿ ತೆಗೆದುಕೊಂಡ ನಕ್ಸಲರು ಇದೀಗ ರೈಲು ಹಳಿಯಲ್ಲಿ ನೆಲಬಾಂಬ್ ಸ್ಫೋಟಿಸಿ ಗೂಡ್ಸ್ ರೈಲೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ರೈಲು ಚಾಲಕ ಹಾಗೂ ಸಹಾಯಕ ಚಾಲಕರಿಬ್ಬರೂ ಗಾಯಗೊಂಡಿದ್ದಾರೆ. ಗೂಡ್ಸ್ ರೈಲಾಗಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಂಗಳವಾರ ಮಧ್ಯರಾತ್ರಿ 2 ಗಂಟೆಯ ವೇಳೆಗೆ ದಾಳಿ ಜರಗ್ರಾಮ್ ಹಾಗೂ ಖಾಟ್‌ಕುರಾ ನಡುವಿನ ಮಾರ್ಗ ಮಧ್ಯದಲ್ಲಿ ನೆಲಬಾಂಬು ಸ್ಫೋಟಿಸಿ ರೈಲು ಹಳಿಯನ್ನು ದ್ವಂಸಗೊಳಿಸಿದ್ದಾರೆ. ಇದೇ ಸಂದರ್ಭ ಈ ಮಾರ್ಗವಾಗಿ ಬಂದ ಗೂಡ್ಸ್ ರೈಲು ಈ ದಾಳಿಯಿಂದಾಗಿ ಅವಘಢಕ್ಕೀಡಾಗಿದೆ. ಗಾಯಾಳುಗಳಾದ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲು ಹಳಿ ದ್ವಂಸಗೊಂಡಿರುವುದರಿಂದ ಈಗಾಗಲೇ ಆ ಮಾರ್ಗವಾಗಿ ಸಾಗಬೇಕಿದ್ದ ಮೂರು ರೈಲುಗಳ ಪಥ ಬದಲಿಸಲಾಗಿದೆ. ಅಹಮದಾಬಾದ್ ಎಕ್ಸ್‌ಪ್ರೆಸ್ (ಹೌರಾದಿಂದ ಅಹಮದಾಬಾದ್‌ಗೆ), ಉತ್ತಕಲ್ ಎಕ್ಸ್‌ಪ್ರೆಸ್ (ಭುವನೇಶ್ವರದಿಂದ ದೆಹಲಿಗೆ), ಪುರುಷೋತ್ತಮ ಎಕ್ಸ್‌ಪ್ರೆಸ್ (ಪುರಿಯಿಂದ ದೆಹಲಿಗೆ) ರೈಲುಗಳನ್ನು ಪಥ ಬದಲಿಸಲಾಗಿದ್ದು, ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ರೇಲ್ವೆ ಅಧಿಕಾರಿಗಳು ಈಗಾಗಲೇ ದ್ವಂಸಗೊಳಿಸಿರುವ ಪ್ರದೇಶಕ್ಕೆ ತಲುಪಿದ್ದು, ಎಲ್ಲಾ ರೈಲುಗಳ ಸಂಚಾರವನ್ನು ಬೆಳಗ್ಗೆ 10ರವರೆಗೆ ಸ್ಥಗಿತಗೊಳಿಸಲಾಗಿದೆ. ನಕ್ಸಲರು ಈಗಾಗಲೇ ಹಲವರನ್ನು ಬಲಿ ತೆಗೆದುಕೊಂಡಿದ್ದು, ಇನ್ನೂ ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಇದೇ ವೇಳೆ ೃಹ ಸಚಿವ ಪಿ.ಚಿದಂಬರಂ ಕೂಡಾ ನಕ್ಸಲರಿಗೆ ತಮ್ಮ ಹಿಂಸೆಯನ್ನು ತ್ಯಜಿಸಿ ಮಾತುಕತೆಗೆ ಬನ್ನಿ ಎಂದು ತೆರೆದ ಆಹ್ವಾನ ನೀಡಿದ್ದಾರೆ.