ಲೈಲಾ ಚಂಡಮಾರುತ:ಚೆನ್ನೈಯಲ್ಲಿ ಭಾರೀ ಮಳೆ, ಆಂಧ್ರಕ್ಕೂ ಮುನ್ನೆಚ್ಚರಿಕೆ
ಚೆನ್ನೈ, ಬುಧವಾರ, 19 ಮೇ 2010( 20:09 IST )
PTI
ತಮಿಳುನಾಡಿನ ಉತ್ತರ ಕರಾವಳಿ ತೀರ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಮಳೆಯಿಂದ ತೊಯ್ದು ಹೋಗಿದ್ದು, ಇದೀಗ ಲೈಲಾ ಚಂಡಮಾರುತ ಬಂಗಳಕೊಲ್ಲಿಯಿಂದ ಆಂಧ್ರ ಕರಾವಳಿಯತ್ತ ಸಾಗಿದೆ. ಗುರುವಾರ ಆಂಧ್ರ ಕರಾವಳಿಯಲ್ಲಿ ತೀವ್ರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.
ಚೆನ್ನೈ ಸೇರಿದಂತೆ ತಮಿಳುನಾಡಿನ ತೀರ ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈ ನಗರದಲ್ಲಿ ಮಳೆ ನೀರು ನಿಂತು ಹಲವಾರು ಮನೆಗಳಿಗೆ ನುಗ್ಗಿದೆ. ಭಾರೀ ಮರಗಳೂ ಧರೆಗುರುಳಿದ್ದಲ್ಲದೆ, ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಇದೇ ವೇಳೆ ಚಂಡಮಾರುತ ಚೆನ್ನೈ ತೀರದಿಂದ ಆಂಧ್ರ ತೀರದೆಡೆಗೆ ಬೀಸಲು ಆರಂಭಿಸಿದ್ದು, ಆಂದ್ರ ಕರಾವಳಿಯಲ್ಲಿ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಏತನ್ಮಧ್ಯೆ ರಾಮೇಶ್ವರಂನಲ್ಲಿ ನೂರಾರು ಮೀನುಗಾರರ ದೋಣಿಗಳು ಕಣ್ಮರೆಯಾಗಿದೆ. ಐವರು ಮೀನುಗಾರರು ಕಣ್ಮರೆಯಾಗಿದ್ದು, 25ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈನಿಂದ 190ಕಿಮೀ ಪೂರ್ವಕ್ಕೆ ಇನ್ನೂ ಮಳೆಯಾಗುವ ಸಂಭವವಿದೆ ಎನ್ನಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆಂಧ್ರದ ತೀರಗಳಾದ ಓಂಗೋಲ್, ವಿಶಾಖಪಟ್ಟಣಗಳ್ಲಲಿ ಮಳೆಯಾಗುವ ಸಂಭವವಿದೆ. ಆಂಧ್ರದ ಕಳಿಂಗಪಟ್ಟಣಂ, ಗಂಗಾವರಂ, ಕಾಕಿನಾಡ, ವಿಶಾಖಪಟ್ಟಮಂ, ಮಚಲೀಪಟ್ಟಣಗಳಲ್ಲಿ ಬಿರುಗಾಳಿ ಸಮೇತ ಭಾರೀ ಮಳೆ ಸುರಿವ ಸಂಭವವಿದ್ದು, ತಮಿಳುನಾಡು ತೀರ ಹಾಗೂ ಪಾಂಡಿಚೇರಿ ಕರಾವಳಿಗಳಲ್ಲೂ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.
ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ ತೀರಗಳಲ್ಲಿ 25 ಸೆಂಮೀ.ಗಳಿಗಿಂತಲೂ ಹೆಚ್ಚು ಮಳೆ ಸುರಿಯಲಿದ್ದು, ಮುಂದಿನ 48 ಗಂಟೆಗಳ ಕಾಲ ಮಳೆ ಇರಲಿದೆ ಎಂದಿದೆ. ರಾಮೇಶ್ವರಂನಲ್ಲಿ ಈಗಾಗಲೇ 140 ಮೀನುಗಾರರ ದೋಣಿಗಳು ಚಂಡಮಾರುತದಿಂದಾಗಿ ಜಖಂಗೊಡಿದ್ದು, ಪಂಬಂ ಹಾಗೂ ಮಂಡಪಂ ತೀರದಲ್ಲಿ ಸಾಕಷ್ಟು ಹಾನಿಗೊಳಗಾಗಿದೆ.
ಚೆನ್ನೈಯಲ್ಲಿ ಈಗಾಗಲೇ ಬೆಳಿಗ್ಗೆ 8 ಗಂಟೆಗೂ ಮೊದಲು ಕಳೆದ 24 ಗಂಟೆಗಳಲ್ಲಿ ಎಂಟು ಸೆಮೀ ಮಳೆಯಾಗಿದೆ. ಭಾರೀ ಸೆಖೆಯಿಂದ ಕಂಗೆಟ್ಟಿದ್ದ ಚೆನ್ನೈ ಇದೀಗ ಮಳೆಯಿಂದ ತಣ್ಣಗಾಗಿದೆ.