ಬೆಳಿಗ್ಗೆ ಎದ್ದು ಪತ್ರಿಕೆಗಳನ್ನು ಓದಲೇ ಬೇಡಿ! ಹೀಗನ್ನೋದು ನಾವಲ್ಲ. ಬದಲಾಗಿ ಸುಪ್ರೀಂಕೋರ್ಟ್!
ಹೌದು. ಇದು ಆಶ್ಚರ್ಯವೆನಿಸಿದರೂ ಸತ್ಯ. ದಿನವಿಡೀ ಫ್ರೆಶ್ ಆಗಿ ಇರಬೇಕೆಂದರೆ, ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯುತ್ತಾ ಕಣ್ಣುಜ್ಜಿಕೊಳ್ಳುತ್ತಾ ಪತ್ರಿಕೆ ಓದಬೇಡಿ ಎಂದು ಸುಪ್ರೀಂಕೋರ್ಟ್‌ನ ರಜಾಕಾಲದ ನ್ಯಾಯಪೀಠದ ನ್ಯಾ.ಜಿ.ಎಸ್.ಸಿಂಘ್ವಿ ಹಾಗೂ ನ್ಯಾ.ಸಿ.ಕೆ.ಪ್ರಸಾದ್ ನಾಗರಿಕರಿಗೆ ಕಿವಿಮಾತು ಹೇಳಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯ ನೈಜವಲ್ಲದ ತೀರ್ಪುಗಳಿಂದಾಗಿಯೇ ಇಂದು ಮಾವೋವಾದಿಗಳ ಆಕ್ರಮಣಕ್ಕೆ ಪುಷ್ಠಿ ನೀಡುತ್ತದೆ ಎಂಬ ವೀರಪ್ಪ ಮೊಯಿಲಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನ್ಯಾಯಾಲಯದಲ್ಲಿ ಪ್ರತಿಧ್ವನಿಸಿದೆ. ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಇತ್ತೀಚೆಗೆ, ಇಂದು ನ್ಯಾಯಾಲಯ ಅರಣ್ಯ ಪ್ರದೇಶದಲ್ಲಿರುವ ಸಾಮಾನ್ಯ ಪರಿಸ್ಥಿತಿಯನ್ನು ಅರಿತುಕೊಂಡು ತೀರ್ಪು ನೀಡುತ್ತಾ ಬಂದಿದ್ದರೆ, ಇಂದು ಮಾವೋವಾದಿಗಳು ಈ ಪರಿಸ್ಥಿತಿ ತಲುಪುತ್ತಿರಲಿಲ್ಲ ಎಂದು ವೀರಪ್ಪ ಮೊಯಿಲಿ ಹೇಳಿದ್ದರು.
ಮೊಯಿಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನ್ಯಾಯಾಧೀಶ ಸಿಂಘ್ವಿ, ನಾವೀಗ ವೃತ್ತಪತ್ರಿಕೆಗಳನ್ನು ಓದುವುದನ್ನೇ ನಿಲ್ಲಿಸಿದ್ದೇವೆ. ಬೆಳಗ್ಗಿನ ಎರಡು ಗಂಟೆ ಕಾಲ ವೃತ್ತ ಪತ್ರಿಕೆಗಳನ್ನು ಓದದೇ ಇರೋದೇ ಒಳ್ಳೆಯದು. ಹಾಗಾಗಿಯಾದರೂ ಫ್ರೆಶ್ ಆಗಿರಬಹುದು ಎಂದು ಅವರು ಹೇಳಿದರು.
ಮೊಯಿಲಿ ಹೇಳಿಕೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನ್ಯಾಯಾಧೀಶರು ಹೇಳಿಕೆ ನೀಡಿದ್ದು, ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಮೊಯಿಲಿ ಹೇಳಿಕೆಗೆ ನೇರವಾಗಿ ಪ್ರತಿಕ್ರಿಯಿಸುವ ಬದಲು ಈ ರೀತಿಯಾಗಿ ಪ್ರತಿಕ್ರಿಯಿಸುವುದು ಭಾರೀ ಒಳ್ಳೆಯದು ಎಂದೂ ಸಿಂಘ್ವಿ ಹೇಳಿದ್ದಾರೆ.