'ನಕ್ಸಲೀಯರು ದೇಶದ ದೊಡ್ಡ ಭಯೋತ್ಪಾದಕರಾಗಿದ್ದಾರೆ' ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ರಾಜ್ಯದಲ್ಲಿ ನಕ್ಸಲೀಯರು ನಡೆಸಿದ ಮಾರಣಹೋಮದ ಎರಡು ದಿನಗಳ ನಂತರ ಪ್ರತಿಕ್ರಿಯೆ ನೀಡಿದ್ದು, ಇವರು ದೇಶದ ಆಂತರಿಕ ಭದ್ರತೆಗೆ ದೊಡ್ಡ ಅಪಾಯಕಾರಿಗಳಾಗಿದ್ದಾರೆ ಎಂದು ಬುಧವಾರ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಾಂತೇವಾಡದಲ್ಲಿ ಮತ್ತೆ ಮುಗ್ದ ನಾಗರಿಕರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿ ಹತ್ಯೆಗೈಯುವ ಮೂಲಕ ನಕ್ಸಲೀಯರ ನಿಜ ಮುಖವಾಡ ಬಯಲಾಗಿದೆ. ನಕ್ಸಲೀಯರ ಈ ಅಮಾನವೀಯ ದಾಳಿಯನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸಬೇಕಾಗಿದೆ. ಈ ಘಟನೆ ರಾಷ್ಟ್ರವ್ಯಾಪಿ ಪರಿಣಾಮ ಬೀರಲಿದೆ. ಆ ನಿಟ್ಟಿನಲ್ಲಿ ನಕ್ಸಲ್ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ನಾವು ಸಂಪೂರ್ಣ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸದರು.
ಬುಲೆಟ್‌ನಿಂದ ಸಾಮಾಜಿಕ ಕ್ರಾಂತಿ ಮಾಡಲು ನಕ್ಸಲೀಯರು ಹೊರಟಿದ್ದಾರೆಂದು ಕಿಡಿಕಾರಿದ ಸಿಂಗ್, ಆದರೆ ಪ್ರಜಾಪ್ರಭುತ್ವದಲ್ಲಿ ಅವರ ಈ ಸಿದ್ದಾಂತದಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು. ಅಲ್ಲದೇ ನಕ್ಸಲೀಯರು ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದ್ದಾರೆ. ಇದು ಕೇವಲ ಒಂದು ಅಥವಾ ಕೆಲವು ರಾಜ್ಯಗಳ ಸಮಸ್ಯೆಯಲ್ಲ, ಇಡೀ ದೇಶವ್ಯಾಪಿ ಪಿಡುಗಾಗಿದೆ. ಹಾಗಾಗಿ ನಕ್ಸಲೀಯರನ್ನು ನಿಗ್ರಹಿಸಲೇಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ನಕ್ಸಲೀಯರು ಭಯೋತ್ಪಾದಕರಿಗಿಂತ ಕಡಿಮೆಯೇನಲ್ಲ ಎಂದ ಅವರು, ಅವರು ದೊಡ್ಡ ಭಯೋತ್ಪಾದಕರೇ ಆಗಿದ್ದಾರೆಂದು ತಾನು ಬಣ್ಣಿಸುವುದಾಗಿ ಹೇಳಿದರು. ದೇಶದ ಪ್ರಜಾಪ್ರಭುತ್ವಕ್ಕೆ ನಕ್ಸಲಿಸಂ ದೊಡ್ಡ ಸಮಸ್ಯೆಯಾಗಿದೆ. ಗನ್ ಮೂಲಕವೇ ಅಧಿಕಾರ ಹಿಡಿಯುವ ಕನಸು ಅವರದ್ದಾಗಿದೆ. ಆ ನೆಲೆಯಲ್ಲಿ ಅಮಾಯಕ ಜನರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡುತ್ತಿದ್ದಾರೆ. ಅವರಿಂದಾಗಿಯೇ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು. ಇತ್ತೀಚೆಗಷ್ಟೇ ಸಿಆರ್‌ಪಿಎಫ್‌ನ 76ಸಿಬ್ಬಂದಿಗಳನ್ನು ಹತ್ಯೆಗೈದಿದ್ದರು, ಹಾಗಾದರೆ ಅವರನ್ನು ಭಯೋತ್ಪಾದಕರು ಅಂತ ಯಾಕೆ ಪರಿಗಣಿಸಬಾರದು. ಹಾಗಾದರೆ ಅವರು ಭಯೋತ್ಪಾದಕರು ಅಲ್ಲ ಅಂತಾದ್ರೆ ಅವರು ಯಾರೆಂದು ನಾನು ಪ್ರಶ್ನಿಸುತ್ತೇನೆ ಎಂದು ಸವಾಲೊಡ್ಡಿದರು.
ಅವರ ಕೃತ್ಯ ಭಯೋತ್ಪಾದನೆಗಿಂತ ಕಡಿಮೆಯೇನಿಲ್ಲ, ಕಳೆದ ಹತ್ತು ವರ್ಷಗಳಲ್ಲಿ ಒಂದು ಸಾವಿರ ನಾಗರಿಕರನ್ನು ಹತ್ಯೆಗೈದಿದ್ದಾರೆ. ಪ್ರಯಾಣಿಕರ ಮೇಲೆ ದಾಳಿ ನಡೆಸಿದ್ದಾರೆ. ಶಾಲಾ ಮಕ್ಕಳ ಬಸ್‌ಗಳ ಮೇಲೆ ದಾಳಿ, ಜನ ಅದಾಲತ್ ಹೆಸರಿನಲ್ಲಿ ನಾಗರಿಕರನ್ನು ಕೊಲ್ಲುವುದು. ಇದೆಲ್ಲಾ ಏನು? ಇದು ಭಯೋತ್ಪಾದನೆ ಅಲ್ಲವೇ? ಇಂತಹ ಅಮಾನುಷ ಕೃತ್ಯ ಎಸಗುವ ಮೂಲಕ ಭಯೋತ್ಪಾದನೆಯನ್ನು ಪಸರಿಸುತ್ತಿದ್ದಾರೆ ಎಂದು ಅಂಕಿ-ಅಂಶಗಳ ಸಮೇತ ವಿವರಣೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ದಾಂತೇವಾಡದಲ್ಲಿ ನಕ್ಸಲೀಯರು ಬಸ್‌ವೊಂದನ್ನು ನೆಲಬಾಂಬ್‌ನಿಂದ ಸ್ಫೋಟಿಸಿದ ಪರಿಣಾಮ 14 ಪೊಲೀಸರು ಸೇರಿದಂತೆ 35 ಜನರು ಸಾವನ್ನಪ್ಪಿದ್ದರು. ಘಟನೆ ನಡೆದು ಎರಡು ದಿನದ ಬಳಿಕ ರಮಣ್ ಸಿಂಗ್ ಅವರು ಇಂದು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಯಾವುದೇ ಕಾರಣಕ್ಕೂ ತಮ್ಮ ಸರ್ಕಾರ ನಕ್ಸಲೀಯರ ಬಗ್ಗೆ ಮೃದು ಧೋರಣೆ ತಾಳಿಲ್ಲ ಎಂದು ಸಿಂಗ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.