ಕೇಂದ್ರದ ಯುಪಿಎ ಸರ್ಕಾರ ಎರಡನೇ ಅವಧಿಯಲ್ಲಿ ಮೊದಲ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಖಾಸಗಿ ಚಾನೆಲ್, ಪತ್ರಿಕೆಗಳು ನಡೆಸಿದ ಸಮೀಕ್ಷೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಸಚಿವ ಸ್ಥಾನವನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ವಿಶ್ಲೇಷಿಸಿದೆ.
ಭಾರತದ ಅತ್ಯಂತ ಬುದ್ದಿವಂತ ಹಾಗೂ ಸುಂದರವಾಗಿ ಕಾಣುವ ವಿದೇಶಾಂಗ ಸಚಿವ ಎಂದು ಸಿಎನ್ಎನ್ ಹಾಗೂ ಹಿಂದೂಸ್ತಾನ್ ಟೈಮ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ! ಅಲ್ಲದೇ ಅವರ ಸಚಿವ ಸ್ಥಾನದ ಕಾರ್ಯನಿರ್ವಹಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೃಷ್ಣ ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶೇ.39ರಷ್ಟು ಜನರು ಶಹಬ್ಬಾಸ್‌ಗಿರಿ ನೀಡಿದ್ದರೆ, ಶೇ.26ರಷ್ಟು ಊಹಿಸಲಾಗದು ಎಂದು ಹೇಳಿದ್ದಾರೆ. ಶೇಕಡಾ 20ರಷ್ಟು ಇನ್ನೂ ಗಟ್ಟಿ ನಿಲುವು ತಾಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಸೂಕ್ಷ್ಮ ವಿಷಯಗಳನ್ನು ಎದುರಿಸುವಾಗ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಹಾಗೂ ಚೀನಾ ವಿಷಯದಲ್ಲಿ ಸಮರ್ಥವಾಗಿ ಎದುರಿಸುವಲ್ಲಿ ವಿದೇಶಾಂಗ ಸಚಿವಾಲಯ ಹಿಂದೆ ಬಿದ್ದಿದೆ ಎಂದು ದೂರಿದ್ದಾರೆ.
ಜೊತೆಗೆ ಮುಂಬೈ ದಾಳಿ ಎದುರಿಸುವಲ್ಲಿ ವಿಫಲವಾಗಿದೆ ಎಂದು ಶೇಕಡಾ 15ರಷ್ಟು ಮಂದಿ ಅಭಿಪ್ರಾಯವ್ಯಕ್ತಪಡಿಸಿದ್ದು, ಒಟ್ಟಾರೆ ಎಸ್.ಎಂ.ಕೃಷ್ಣ ಅವರ ಸಚಿವ ಸ್ಥಾನದ ಕಾರ್ಯನಿರ್ವಹಣೆ ಕೆಟ್ಟದಾಗಿಯೇನು ಇಲ್ಲ ಎಂಬ ಪ್ರಶ್ನೆಗೆ 5 ಅಂಕಗಳಲ್ಲಿ 3.2 ಅಂಕ ನೀಡಲಾಗಿದೆ.