ನೈಸರ್ಗಿಕ ಅನಿಲ ದರ ಏರಿಕೆಯಾಯಿತು, ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮತ್ತೆ ಊಹಾಪೋಹಗಳು ಕೇಳಿಬರುತ್ತಲೇ ಇದೆ. ಅದರ ನಡುವೆಯೇ ಮತ್ತೊಂದು ಶಾಕ್. ಇದೀಗ ವಿದ್ಯುತ್ ದರವನ್ನು ಕೂಡ ಕೇಂದ್ರ ಸರಕಾರವು ಯುನಿಟ್‌ಗೆ 1 ರೂಪಾಯಿ ಹೆಚ್ಚಿಸಲು ನಿರ್ಧರಿಸಿದೆ.
ವಿದ್ಯುತ್ ದರ ಏರಿಕೆಯ ಕುರಿತು ಕೇಂದ್ರ ವಿದ್ಯುತ್ ಸಚಿವ ಸುಶೀಲ್ ಕುಮಾರ್ ಶಿಂಧೆ ಗುರುವಾರ ಸುಳಿವು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಈ ಬಗ್ಗೆ ವಿವರವಾಗಿ ಏನೂ ನಿರ್ಧರಿಸಿಲ್ಲವಾದರೂ, ಯುನಿಟ್‌ಗೆ ಕನಿಷ್ಠ 1 ರೂ. ಏರಿಕೆಯಾಗಲಿದೆ ಎಂದಿದ್ದಾರೆ.
ವಿದ್ಯುತ್ ದರವನ್ನು ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ನಿರ್ಣಯಿಸುತ್ತದೆ. ಬುಧವಾರವಷ್ಟೇ ಕೇಂದ್ರ ಸರಕಾರವು ನೈಸರ್ಗಿಕ ಅನಿಲ ದರವನ್ನು ದುಪ್ಪಟ್ಟಿಗಿಂತಲೂ ಹೆಚ್ಚು, ಅಂದರೆ 4.20 ಡಾಲರ್/ಎಂಎಂಬಿಟಿಯು (ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್) ಏರಿಸಿತ್ತು. ಅಲ್ಲದೆ, ವಿದ್ಯುತ್, ರಸಗೊಬ್ಬರ ಮತ್ತು ನಗರ ಅನಿಲ ಯೋಜನೆಗಳಿಗೆ ಮಾರಾಟವಾಗುವ ವಿದ್ಯುತ್ ದರವನ್ನು ಸಾವಿರ ಕ್ಯುಬಿಕ್ ಮೀಟರ್‌ಗೆ 3,200ರಿಂದ 6,818 ರೂಪಾಯಿಗಳಿಗೆ ಏರಿಸಿತ್ತು. ಹೊಸ ಅನಿಲ ದರದ ಪರಿಣಾಮದಿಂದಾಗಿ, ವಾಹನಗಳಿಗೆ ಬಳಸಲಾಗುವ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ದರಗಳಲ್ಲಿ ಶೇ.20ರಷ್ಟು ಏರಿಕೆಯಾಗಲಿದೆ. ದೆಹಲಿಯಲ್ಲಿ ಸದ್ಯ ಇರುವ ಸಿಎನ್‌ಜಿ ದರವು ಕೆಜಿಗೆ 21.90 ರೂಪಾಯಿ.