ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಸುಮಾರು 16.5 ಟನ್ಸ್ ಉನ್ನತ ಗುಣಮಟ್ಟದ ಅಮೋನಿಯಂ ನೈಟ್ರೇಟ್ ಸ್ಫೋಟಕವನ್ನು ತುಂಬಿಸಿಕೊಂಡು ಬರುತ್ತಿದ್ದ ಟ್ರಕ್‌ವೊಂದನ್ನು ನಕ್ಸಲೀಯರು ಬಸ್ತಾರ್ ಜಿಲ್ಲೆಯಲ್ಲಿ ಅಪಹರಿಸಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಸ್ಫೋಟಕವನ್ನು ಅಪಹರಿಸಿದ್ದ ಮಾವೋದಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಬೃಹತ್ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಾಗಿಸುತ್ತಿದ್ದ ಟ್ರಕ್ ಅನ್ನು ನಕ್ಸಲೀಯರು ಬಸ್ತಾರ್ ಜಿಲ್ಲೆಯಲ್ಲಿ ಬುಧವಾರ ಅಪಹರಿಸಿದ್ದರು. ಅಮೋನಿಯಂ ನೈಟ್ರೇಟ್‌ನ್ನು ಸ್ಫೋಟಕ ತಯಾರಿಸಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಿಶಾಖಪಟ್ಟಣಂ ಮೂಲಕ ರಾಯ್‌ಪುರದ ಫ್ಯಾಕ್ಟರಿಯೊಂದಕ್ಕೆ ಅಮೋನಿಯಂ ನೈಟ್ರೇಟ್ ಸಾಗಿಸುತ್ತಿದ್ದ ವೇಳೆ ನಕ್ಸಲೀಯರು ಈ ಕೃತ್ಯ ಎಸಗಿದ್ದಾರೆ. ವಿಶಾಖಪಟ್ಟಣಂನಿಂದ ರಾಯ್‌ಪುರಕ್ಕೆ ತೆರಳಲು ಬಸ್ತಾರ್ ಜಿಲ್ಲೆಯ ಹಾದಿ ಕಡಿಮೆ ಅವಧಿಯದ್ದಾಗಿದ್ದರಿಂದ ಟ್ರಕ್ ಈ ಪ್ರದೇಶದಿಂದ ತೆರಳಿತ್ತು. ಆದರೆ ಟ್ರಕ್‌ಗೆ ಯಾವುದೇ ಭದ್ರತಾ ಸಿಬ್ಬಂದಿಗಳನ್ನು ನೀಡಲಾಗಿಲ್ಲವಾಗಿತ್ತು.
ಟ್ರಕ್ ಚಾಲಕನನ್ನು ಮಾವೋವಾದಿಗಳು ನಿನ್ನೆ ತಡರಾತ್ರಿ ಬಿಡುಗಡೆಗೊಳಿಸಿದ ನಂತರ ಮಾಹಿತಿ ತಿಳಿದು ಬಂದಿರುವುದಾಗಿ ಬಸ್ತಾರ್ ಪೊಲೀಸ್ ವರಿಷ್ಠಾಧಿಕಾರಿ ಪಿ.ಸುಂದರ್ರಾಜ್ ತಿಳಿಸಿದ್ದಾರೆ. ಟ್ರಕ್ ಅಪಹರಣದ ವಿಷಯ ತಿಳಿಯುತ್ತಿದ್ದಂತೆಯೇ ಸ್ಪೋಟಕ ಹಾಗೂ ನಕ್ಸಲೀಯರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆದರೆ ಈವರೆಗೂ ಯಾವುದೇ ಸುಳಿವು ಲಭಿಸಿಲ್ಲ ಎಂದು ಹೇಳಿದರು.