ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನೂ ದಕ್ಕಿಲ್ಲ ಬ್ಲ್ಯಾಕ್ ಬಾಕ್ಸ್, ಏನಿದರ ರಹಸ್ಯ? (Black Box | Mangalore Airport | Bajpe | Air India Express)
Bookmark and Share Feedback Print
 
ಮಂಗಳೂರು ವಿಮಾನ ಅಪಘಾತದ ಸಂಪೂರ್ಣ ರಹಸ್ಯವನ್ನು ತನ್ನೊಡಲಲ್ಲಿ ಕಾಪಾಡಿಕೊಂಡಿರುವ 'ಬ್ಲ್ಯಾಕ್ ಬಾಕ್ಸ್' (ಕಪ್ಪು ಪೆಟ್ಟಿಗೆ) ಇನ್ನೂ ಸಿಕ್ಕಿಲ್ಲ. ಬಜ್ಪೆ ವಿಮಾನ ನಿಲ್ದಾಣದಲ್ಲಿ ದುರಂತ ನಡೆದು ಎರಡು ದಿನಗಳೇ ಕಳೆದರೂ, ಬ್ಲ್ಯಾಕ್ ಬಾಕ್ಸ್ ಹುಡುಕಾಟ ತೀವ್ರಗೊಂಡಿದೆ. ವಿಮಾನ ದುರಂತ ನಡೆದ ಸುತ್ತಮುತ್ತಲ ಒಂದು ಕಿಮೀ ವಿಸ್ತಾರದಲ್ಲಿ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ.

ಮುಂಬೈನಿಂದ ಸೋಲಾರ್ ಉಪಕರಣವೊದನ್ನು ತರಿಸಿಕೊಂಡು ಆ ಮೂಲಕ ಬ್ಲ್ಯಾಕ್ ಬಾಕ್ಸ್ ಹುದುಗಿರುವ ಜಾಗವನ್ನು ಪತ್ತೆ ಮಾಡುವ ಸಾಹಸವೂ ನಡೆಯುತ್ತಿದೆ. ಇನ್ನೊಂದೆಡೆ, ವಿಮಾನ ತಯಾರಿಸಿದ ಸಂಸ್ಥೆ ಬೋಯಿಂಗ್ ಕೂಡಾ ತಾಂತ್ರಿಕವಾಗಿ ಪತ್ತೆಹಚ್ಚುವ ಸಲಹೆಗಳನ್ನು ನೀಡುತ್ತಿದೆ.

ಕಪ್ಪು ಪೆಟ್ಟಿಗೆ ಉಪಕರಣಕ್ಕೆ ಹೆಸರು ಕಪ್ಪುಪೆಟ್ಟಿಗೆ ಎಂದಾದರೂ ಇದು ಕಪ್ಪು ಬಣ್ಣದ ಪೆಟ್ಟಿಗೆಯಲ್ಲ. ಕಡು ಕಿತ್ತಳೆ ಕೇಸರಿ ಬಣ್ಣವನ್ನು ಹೊಂದಿರುವ ಇದನ್ನು ವಿಮಾನದ ಬಾಲದ ಭಾಗದಲ್ಲಿ ಇಡಲಾಗುತ್ತದೆ. ಯಾವುದೇ ವಿಮಾನ ದುರಂತದ ಸಂದರ್ಭದಲ್ಲಿಯೂ ಅತೀ ಕಡಿಮೆ ಹಾನಿಯಾಗುವ ಪ್ರದೇಶ ಎಂದರೆ ವಿಮಾನದ ಬಾಲ ಹಾಗೂ ಹಿಂಭಾಗ. ಹೀಗಾಗಿ ಇದನ್ನು ಹಿಂಭಾಗದಲ್ಲಿ ಇರಿಸಲಾಗುತ್ತದೆ ಎನ್ನುತ್ತಾರೆ ತಜ್ಞರು.

ಕಿತ್ತಳೆ ಬಣ್ಣದ ಈ ಪೆಟ್ಟಿಗೆಗೆ ಕಪ್ಪು ಪೆಟ್ಟಿಗೆ ಎಂಬ ಹೆಸರಿಡಲು ಕಾರಣವಾದರೂ ಏನು ಎಂಬ ಸಂಶಯ ಹುಟ್ಟದೇ ಇರಲಾರದು. ದುರಂತವಾದ ಸಂದರ್ಭದಲ್ಲಿ ಈ ಪೆಟ್ಟಿಗೆಯ ಮೂಲಕ ಮಾಹಿತಿ ಪಡೆಯುವ ಕಾರಣ ಇದನ್ನು 'ಬ್ಲ್ಯಾಕ್ ಬಾಕ್ಸ್' ಎನ್ನುತ್ತಾರೆ. ಹಾಗಾಗಿ ಪೆಟ್ಟಿಗೆಯ ಬಣ್ಣ ಯಾವುದಾದರೂ, ದುರಂತದ ರಹಸ್ಯವನ್ನು ಅಡಗಿಸಿಟ್ಟ ಪೆಟ್ಟಿಗೆಯಾಗಿರುವ ಮೂಲಕ ಅದು ತನ್ನ ನಿಜ ಬಣ್ಣಕ್ಕಿಂತಲೂ ಭಾವನಾತ್ಮಕವಾಗಿ 'ಕಪ್ಪು ಪೆಟ್ಟಿಗೆ'ಯಾಗಿಯೇ ಕಾಡುತ್ತದೆ!

ಏನಿದು ಬ್ಲ್ಯಾಕ್ ಬಾಕ್ಸ್?: ಬ್ಲ್ಯಾಕ್ ಬಾಕ್ಸ್ (ಕಪ್ಪು ಪೆಟ್ಟಿಗೆ) ಉಪಕರಣದಲ್ಲಿ ಎರಡು ಪ್ರಮುಖ ಭಾಗಗಳಿವೆ. ಒಂದು 'ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್'. ಇನ್ನೊಂದು 'ಫ್ಲೈಟ್ ಡಾಟಾ ರೆಕಾರ್ಡರ್'. ಇದರ ಪೈಕಿ ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂಬ ಉಪಕರಣ ಡಿಜಿಟಲ್ ಆಗಿ ಕಾಕ್‌ಪಿಟ್‌ನೊಳಗೆ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ದಾಖಲಿಸುತ್ತದೆ. ಅವಘಢಗಳ ಸಂದರ್ಭ ಹಾಗೂ ಮೊದಲು ಪೈಲಟ್‌ಗಳ ಧ್ವನಿ ರೆಕಾರ್ಡ್ ಆಗಿರುತ್ತದೆ. ಹಾಗಾಗಿ ಇದು ಯಾವುದೇ ವಿಮಾನ ದುರಂತವಾದರೂ, ಅದು ಹೇಗಾಯಿತೆಂದು ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಉಪಕರಣವಾಗಿ ಮಹತ್ವ ಪಡೆದಿದೆ.

ಆದರೆ ಈ ಬ್ಲ್ಯಾಕ್ ಬಾಕ್ಸಿನ ಮತ್ತೊಂದು ಭಾಗವಾದ ಫ್ಲೈಟ್ ಡಾಟಾ ರೆಕಾರ್ಡರ್ ಕೂಡಾ ಮಹತ್ವವಾಗಿದ್ದು, ಇದು ವಿಮಾನದ ವೇಗೋತ್ಕರ್ಷ, ಎಂಜಿನ್, ಗಾಳಿಯ ವೇಗ, ವಿಮಾನವಿದ್ದ ಎತ್ತರ, ರಾಡಾರ್ ಇರುವ ಸ್ಥಳ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುತ್ತದೆ. ಇವೆಲ್ಲ ಮಾಹಿತಿಗಳ ಮೂಲಕ ವಿಮಾನ ದುರಂತಕ್ಕೆ ಕಾರಣವನ್ನು ತಜ್ಞರು ಪತ್ತೆ ಮಾಡುತ್ತಾರೆ.

ಈ ಕಪ್ಪು ಪೆಟ್ಟಿಗೆ ಶೂ ಬಾಕ್ಸ್‌ನಷ್ಟು ದೊಡ್ಡದಿದ್ದು, ಇದರ ಹೊರಕವಚ ಪ್ರತಿಫಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊರಕವಚ ಸ್ಟೀಲ್‌‌ನಿಂದ ಆವೃತವಾಗಿದೆ. ಈ ಪೆಟ್ಟಿಗೆ ಯಾವುದೇ ಉಷ್ಣತೆಯನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೀರಿನಲ್ಲಿ ಮುಳುಗಿದರೂ ತನ್ನೊಳಗೆ ಹೊಂದಿರುವ ಯಾವುದೇ ಮಾಹಿತಿಗಳನ್ನು ಕಳೆದುಕೊಳ್ಳುವುದಿಲ್ಲ ಹಾಗೂ ನಾಶವಾಗುವುದಿಲ್ಲ.

ವಿಮಾನ ಅಪಘಾತ ಸಂಭವಿಸಿದ ನಂತರ ಕಪ್ಪು ಪೆಟ್ಟಿಗೆ ಸಿಕ್ಕರೆ ವಿಮಾನ ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಬಹುದು. ಭಾರತದಲ್ಲಿ ಎಲ್ಲಿಯೇ ವಿಮಾನ ಅಪಘಾತ ಸಂಭವಿಸಿದರೂ, ಮೊದಲು ಕಪ್ಪುಪೆಟ್ಟಿಗೆಯನ್ನು ಪಡೆದ ಮೇಲೆ ಅದನ್ನು ಸಿವಿಲ್ ಏವಿಯೇಷನ್‌ನ ಪ್ರಮುಖ ಕಚೇರಿಯಿರುವ ದೆಹಲಿಗೆ ರವಾನಿಸಲಾಗುತ್ತದೆ. ಅಲ್ಲಿಯೂ ಯಾವುದಾದರೂ ಕಾರಣದಿಂದ ಮಾಹಿತಿ ಪಡೆಯಲು ಸಾಧ್ಯವಾಗದೆ ಇದ್ದರೆ, ಕಪ್ಪುಪೆಟ್ಟಿಗೆಯನ್ನು ವಿಮಾನ ತಯಾರಾದ ಸಂಸ್ಥೆಗೆ ರವಾನಿಸಿ ಅಲ್ಲಿಂದ ಮಾಹಿತಿ ಪಡೆದುಕೊಳ್ಳುವ ಕೆಲಸವನ್ನೂ ಮಾಡಲಾಗುತ್ತದೆ.

ಯಾವುದೇ ವಿಮಾನ ದುರಂತದ ಸಂದರ್ಭದಲ್ಲಿಯೂ ಅತೀ ಕಡಿಮೆ ಹಾನಿಯಾಗುವ ಪ್ರದೇಶ ಎಂದರೆ ವಿಮಾನದ ಬಾಲವಾದರೂ, ಬಜ್ಪೆ ವಿಮಾನ ದುರಂತದಲ್ಲಿ ಮಾತ್ರ ಹಿಂಭಾಗವೇ ಅತೀ ಹೆಚ್ಚಿ ಹಾನಿಗೊಂಡಿದ್ದು, ಬಾಲವೇ ಕಾಣೆಯಾಗಿದೆ. ಬಾಲ ಸಿಡಿದು ದೂರ ಹಾರಿರುವುದರಿಂದ ಕಪ್ಪು ಪೆಟ್ಟಿಗೆ ಕಾಣಿಸುತ್ತಿಲ್ಲ. ಇದು ಸಿಕ್ಕರೆ ವಿಮಾನ ಅವಘಢಕ್ಕೆ ಮಹತ್ವದ ಸುಳಿವು ದೊರೆಯಬಹುದು.
ಸಂಬಂಧಿತ ಮಾಹಿತಿ ಹುಡುಕಿ