ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಾಳಿ: ಭೂಗತ ಪಾತಕಿ ಅನ್ಸಾರಿ ಗಲ್ಲುಶಿಕ್ಷೆಗೆ ಸುಪ್ರೀಂ ತಡೆ (Aftab Ahmed Ansari | underworld don | Supreme Court | Kolkata attack)
Bookmark and Share Feedback Print
 
ಕೋಲ್ಕತಾ ದಾಳಿ ಪ್ರಕರಣದ ಆರೋಪಿಯಾಗಿರುವ ಭೂಗತ ಪಾತಕಿ ಅಫ್ತಾಬ್ ಅಹ್ಮದ್ ಅನ್ಸಾರಿಗೆ ವಿಧಿಸಿದ್ದ ಗಲ್ಲುಶಿಕ್ಷೆ ಜಾರಿಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.

2002ರಲ್ಲಿ ಕೋಲ್ಕತಾದಲ್ಲಿ ಅಮೆರಿಕನ್ ಸೆಂಟರ್ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಫ್ತಾಬ್ ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಪೀಠದ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘಾವಿ ಮತ್ತು ಸಿ.ಕೆ.ಪ್ರಸಾದ್, ಈ ಬಗ್ಗೆ ನಾಲ್ಕು ತಿಂಗಳೊಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ಅಲ್ಲದೇ ಅಮೆರಿಕನ್ ದಾಳಿ ಪ್ರಕರಣದಲ್ಲಿ ಆರೋಪಿತರಾದ ಏಳು ಮಂದಿಯಲ್ಲಿ ಒಬ್ಬನಾದ, ಅಫ್ತಾಬ್‌ನ ನಿಕಟವರ್ತಿಯಾಗಿರುವ ಜಾಮಿಲುದ್ದೀನ್ ನಾಸಿರ್‌ನ ಮರಣದಂಡನೆಗೂ ಕೂಡ ಸುಪ್ರೀಂಕೋರ್ಟ್ ಮೇ 10ರಂದು ತಡೆ ನೀಡಿತ್ತು. 2002ರ ಜನವರಿ 22ರಂದು ಕೋಲ್ಕತಾದಲ್ಲಿನ ಅಮೆರಿಕ ಸೆಂಟರ್ ಮೇಲೆ ನಡೆದ ದಾಳಿಯಲ್ಲಿ ಆರು ಮಂದಿ ಪೊಲೀಸರು ಸಾವನ್ನಪ್ಪಿದ್ದು, 14 ಗಾಯಗೊಂಡಿದ್ದರು.

ಅಫ್ತಾಬ್ ಅನ್ಸಾರಿ ದುಬೈ ಮೂಲದ ಭೂಗತ ಪಾತಕಿಯಾಗಿದ್ದು, ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ಸಾರಿ ಎಂದು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದರು. ನಂತರ ಅನ್ಸಾರಿಯನ್ನು ದುಬೈಯಲ್ಲಿ ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ 2005ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಫ್ತಾಬ್ ಮತ್ತು ಜಾಮಿಲುದ್ದೀನ್ ನಾಸಿರ್‌ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಕೋಲ್ಕತಾ ಹೈಕೋರ್ಟ್ ಎತ್ತಿ ಹಿಡಿದಿತ್ತು.

ಅನ್ಸಾರಿ ಮತ್ತು ಜಾಮಿಲುದ್ದೀನ್ ವಿರುದ್ಧ ಭಾರತೀಯ ದಂಡ ಸಂಹಿತೆ 121 (ದೇಶವಿರೋಧಿ ಕೃತ್ಯ), 121ಎ (ಸಂಚು), 302 (ಹತ್ಯೆ) ಮತ್ತು 307 (ಹತ್ಯಾ ಪ್ರಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆ 27(3)ರನ್ವಯ ದೂರು ದಾಖಲಿಸಲಾಗಿತ್ತು.

ಅನ್ಸಾರಿ, ನಾಸಿರ್ ಮತ್ತು ಇನ್ನುಳಿದ ಐದು ಮಂದಿ ಸೆಷನ್ಸ್ ಕೋರ್ಟ್ ನೀಡಿರುವ ಗಲ್ಲುಶಿಕ್ಷೆಯ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನಾಸಿರ್ ಮತ್ತು ಅನ್ಸಾರಿಯ ಗಲ್ಲುಶಿಕ್ಷೆ ಎತ್ತಿಹಿಡಿದು, ಹಸ್ರತ್ ಅಲಾಮ್, ಸಾಕಿಬ್ ಅಖ್ತರ್ ಮತ್ತು ಬೊಬ್ಬಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಇಳಿಸಿತ್ತು. ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ರೆಹಾನ್ ಅಲಾಮ್ ಆಲಿಯಾಸ್ ಮೊಂತಿ ಮತ್ತು ಅದಿಲ್ ಹುಸೈನ್‌ನನ್ನು ಖುಲಾಸೆಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ