ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಲ್ಲು ಶಿಕ್ಷೆ ಕೊಡೋದಿದ್ರೆ ಬೇಗ ಕೊಡಿ: ಅಫ್ಜಲ್ ಗುರು (Afzal Guru | Parliament Attack | Lashkar | Terrorist | Death Sentence)
Bookmark and Share Feedback Print
 
PTI
ಸಂಸತ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮರಣದಂಡನೆಗೆ ಗುರಿಯಾಗಿ, ಭಾರೀ ರಾಜಕೀಯ ಚರ್ಚೆಗೂ ಕಾರಣವಾಗಿದ್ದ ಲಷ್ಕರ್ ಉಗ್ರಗಾಮಿ ಮೊಹಮದ್ ಅಫ್ಜಲ್ ಗುರು, ಏಕಾಂತ ಕಾರಾಗೃಹವಾಸದಿಂದ ರೋಸಿ ಹೋಗಿ, ಗಲ್ಲಿಗೇರಿಸುತ್ತೀರಾದರೆ ಆದಷ್ಟು ಶೀಘ್ರವಾಗಿ ಮುಗಿಸಿಬಿಡಿ ಎಂದು ಮತ್ತೊಮ್ಮೆ ಕೇಳಿಕೊಂಡಿದ್ದಾನೆ.

ಮರಣದಂಡನೆ ಕೊಡಲೇಬೇಕೆಂದಿದ್ದರೆ ಶೀಘ್ರವೇ ಗಲ್ಲಿಗೇರಿಸಿ, ಇಲ್ಲವಾದರೆ ಅದರ ಬಗೆಗೂ ತ್ವರಿತ ನಿರ್ಧಾರ ಕೈಗೊಳ್ಳಿ ಎಂದು ಆತ ಸುಪ್ರೀಂ ಕೋರ್ಟಿಗೆ ಮನವಿ ಅರ್ಜಿ ಸಲ್ಲಿಸಿದ್ದಾನೆ. ತನ್ನ ಕ್ಷಮಾದಾನದ ಅರ್ಜಿಯ ಮೇಲೆ ನಿರ್ಧಾರ ಕೈಗೊಳ್ಳಲಾಗದಿದ್ದರೆ, ತನ್ನನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸುವಂತೆಯೂ ಆತ ಮನವಿಯಲ್ಲಿ ಕೋರಿದ್ದಾನೆ.

ಮಾರ್ಚ್ ತಿಂಗಳಲ್ಲಿ ಆತ ಸುಪ್ರೀಕೋರ್ಟಿಗೆ ಈ ಅರ್ಜಿ ಸಲ್ಲಿಸಿದ್ದಾನೆ. ಇದರಲ್ಲಿ, ತಿಹಾರ್ ಜೈಲಿನಲ್ಲಿ ತನ್ನನ್ನು ಇರಿಸಿರುವುದು ಸಂವಿಧಾನದ 21ನೇ ವಿಧಿ (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಹಾಗೂ 14ನೇ ವಿಧಿ (ಕಾನೂನಿನಲ್ಲಿ ಸಮಾನತೆ)ಗೆ ವಿರುದ್ಧವಾಗಿದೆ ಎಂದೂ ಉಲ್ಲೇಖಿಸಿದ್ದಾನೆ ಎಂದು ಆತನ ವಕೀಲ ಎನ್.ಡಿ.ಪಂಚೋಲಿ ತಿಳಿಸಿದ್ದಾರೆ.

ಅವನಿಗೆ ಮರಣದಂಡನೆ ವಿಧಿಸಲಾಗಿದೆಯೇ ಹೊರತು, ಏಕಾಂತ ಕಾರಾಗೃಹವಾಸ ಶಿಕ್ಷೆಯಲ್ಲ. ವಿಳಂಬ ಮಾಡದೇ ಆದಷ್ಟು ಶೀಘ್ರ ಮರಣದಂಡನೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆತ ಆರ್ಜಿಯಲ್ಲಿ ಒತ್ತಾಯಿಸಿದ್ದಾನೆ.

ತಿಹಾರ್ ಜೈಲಿನಲ್ಲಿ 2002ರಿಂದಲೂ ಇರುವ ಈತನಿಗೆ, ಆಗಾಗ್ಗೆ ತನ್ನ ಕುಟುಂಬಿಕರನ್ನು ಭೇಟಿ ಮಾಡುವುದು ಕಷ್ಟ. ಅವರು ವರ್ಷಕ್ಕೊಮ್ಮೆ ಬರಬೇಕಿದ್ದರೆ ಐದಾರು ಸಾವಿರ ರೂಪಾಯಿ ಖರ್ಚು ಮಾಡಿಬರಬೇಕಾಗುತ್ತದೆ. ತನ್ನನ್ನು ಜಮ್ಮು ಕಾಶ್ಮೀರದ ಜೈಲಿನಲ್ಲಿಟ್ಟರೆ ಅವರಿಗೆ ತನ್ನನ್ನು ಭೇಟಿಯಾಗುವುದು ಸುಲಭವಾಗುತ್ತದೆ ಎಂದು ಆತ ಕಾರಣ ನೀಡಿದ್ದಾನೆ.

ದೇಶದ ಪರಮಾಧಿಕಾರ ಕೇಂದ್ರ ಸಂಸತ್ತಿನ ಮೇಲೆಯೇ ದಾಳಿ ನಡೆಸಿದ್ದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ವಿಳಂಬಿಸುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದವು. ಇದಲ್ಲದೆ, ಅದೊಂದು ಸಂದರ್ಭದಲ್ಲಿ ಇದೇ ಅಫ್ಜಲ್ ಗುರು, ಮನಮೋಹನ್ ಸಿಂಗ್ ಸರಕಾರಕ್ಕೆ ತನ್ನ ಬಗ್ಗೆ ನಿರ್ಧಾರ ಕೈಗೊಳ್ಳುವ ಇಚ್ಛಾಶಕ್ತಿ ಇಲ್ಲ, ಆಡ್ವಾಣಿ ಆಗಿದ್ದಿದ್ದರೆ ಯಾವತ್ತೋ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂದೂ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಂಬಂಧಿತ ಮಾಹಿತಿ ಹುಡುಕಿ