ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೂರೇ ವರ್ಷದಲ್ಲಿ ಮಾಯಾವತಿ ಆಸ್ತಿ ಶೇ.67 ಏರಿಕೆ! (Delhi | Lucknow | Mayawati | BSP | UP chief minister | Mayawati assets)
Bookmark and Share Feedback Print
 
PTI
ಎಲ್ಲರ ಹಿತಕ್ಕಾಗಿ ಎಂಬ ಧ್ಯೇಯವಾಕ್ಯವನ್ನು ಹೊತ್ತು ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ತಾನು ಅಧಿಕಾರಕ್ಕೆ ಬಂದ ಮೂರೇ ವರ್ಷದಲ್ಲಿ ಭರ್ಜರಿ ಆಸ್ತಿ ಸಂಪಾದಿಸಿದ್ದಾರೆ. ಮೂರೇ ವರ್ಷದಲ್ಲಿ ಇವರ ಆಸ್ತಿ ಶೇ.67ರಷ್ಟು ಏರಿಕೆ ಕಂಡಿದೆ.

ಬಡ ದಲಿತ ಜನರ ಹಿತಕ್ಕಾಗಿ ಅಧಿಕಾರಕ್ಕೆ ಬಂದ ಈ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಸದ್ಯದ ಆಶ್ತಿ ಬರೋಬ್ಬರಿ 87 ಕೋಟಿ ರೂಪಾಯಿಗಳು. 2007ರಲ್ಲಿ ಇವರೇ ಹೇಳಿಕೊಂಡರೆ ಮಾಯಾವತಿ ಬಳಿ ಇದ್ದದ್ದು 52 ಕೋಟಿ ರೂ ಮೌಲ್ಯದ ಆಸ್ತಿ. ಆದರೆ ನಂತರದ ಮೂರೇ ವರ್ಷಗಳಲ್ಲಿ 35 ಕೋಟಿ ರೂಪಾಯಿಗಳಷ್ಟು ಆಸ್ತಿ ಹೆಚ್ಚಿಸಿಕೊಂಡಿರುವ ಮಾಯಾವತಿ ಇದೀಗ 87 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡತಿ.

ಈ ಆಸ್ತಿ ವಿವರ ಬಹಿರಂಗವಾದುದು ಇತ್ತೀಚೆಗೆ ಮಾಯಾವತಿ ವಿಧಾನ ಪರಿಷದ್ ಸೀಟಿಗಾಗಿ ನಾಮಪತ್ರ ಸಲ್ಲಿಸುವ ಸಂದರ್ಭ. ಉತ್ತರ ಪ್ರದೇಶದ ಮೇಲ್ಮನೆ ಅಧಿಕಾರಾವಧಿ ಮುಂದಿನ ತಿಂಗಳಿಗೆ ಅಂತ್ಯವಾಗುತ್ತದೆ.

ಭಾರೀ ಚಿನ್ನ, ವಜ್ರಗಳ ಸಂಗ್ರಹವೇ ಇದೆ!: ಮಾಯಾವತಿ ಆಸ್ತಿ ವಿವರ ಹೀಗಿದೆ. ಸದ್ಯದ ಆಕೆಯ ಬ್ಯಾಂಕ್ ಬ್ಯಾಲೆನ್ಸ್ 11.39 ಕೋಟಿ ರೂಪಾಯಿಗಳಾಗಿದ್ದರೆ, 12.95 ಲಕ್ಷ ನಗದು ಹಣವಿದೆ. ಆಭರಣದ ಬಗ್ಗೆಯೂ ಮಾಯಾವತಿಗೆ ವ್ಯಾಮೋಹ ಏನು ಕಡಿಮೆಯಲ್ಲ. ಬರೋಬ್ಬರಿ 1034.26 ಗ್ರ್ಯಾಂಗಳಷ್ಟು ಚಿನ್ನದ ಆಭರಣವಿದೆ. 86.8 ಲಕ್ಷ ರೂಪಾಯಿ ಮೌಲ್ಯದ 380.17 ಕ್ಯಾರೆಟ್‌ಗಳ ವಜ್ರದ ಆಭರಣಗಳಿವೆ. 4.44 ಲಕ್ಷ ರೂಪಾಯಿ ಮೌಲ್ಯದ 18.5 ಕೆಜಿಗಳಷ್ಟು ಬೆಳ್ಳಿಯ ವಸ್ತುಗಳಿವೆ. ಇನ್ನುಳಿದಂತೆ, ಮನೆಯಲ್ಲಿರುವ ಶೋಪೀಸುಗಳು ಪೇಂಟಿಂಗುಗಳ ಮೌಲ್ಯ 15 ಲಕ್ಷ ರೂಪಾಯಿಗಳು.

ದೆಹಲಿಯ ಕೊನ್ನೌಟ್, ಓಕ್ಲಾ ಹಾಗೂ ಸರ್ದಾರ್ ಪಟೇಲ್ ಮಾರ್ಗಗಳಲ್ಲಿ ವಾಣಿಜ್ಯ ಹಾಗೂ ಗೃಹಬಳಕೆಯ ಆಸ್ತಿಗಳಿವೆ. ಲಕ್ನೋದ ಕಂಟೋನ್ಮೆಂಟ್ ರಸ್ತೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿಯೂ ಆಸ್ತಿಗಳಿವೆ. ಇವೆಲ್ಲವುಗಳ ಒಟ್ಟು ಮೊತ್ತ 73 ಕೋಟಿ ರೂಪಾಯಿಗಳು!

ಇತ್ತೀಚೆಗಷ್ಟೇ, ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದವರಿಗೆ ಪರಿಹಾರ ಘೋಷಿಸಲು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಗೋಳಾಡಿದ್ದ ಮಾಯಾವತಿ ಅವರ ಆಸ್ತಿ ಮಾತ್ರ ಭರ್ಜರಿ ಏರಿಕೆಯಾಗಿದೆ ಎಂಬುದು ಗಮನಾರ್ಹ. ರಾಜ್ಯದಲ್ಲಿರುವ ಪ್ರತಿಮೆಗಳ ರಕ್ಷಣೆಗಾಗಿಯೇ ಸೈನಿಕರನ್ನು ನೇಮಿಸಿ 6,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ವಿವಾದಾಸ್ಪದ ಯೋಜನೆಗೂ ಇದೀಗ ಕೈಹಾಕಿ ಮಾಯಾವತಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ