ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕುಸಿದ ಶ್ರೀಕಾಳಹಸ್ತಿ ಗೋಪುರ: ದುರಂತದ ಮುನ್ಸೂಚನೆಯೇ? (Kalahasti Temple, Gali Gopura, Collapse)
Bookmark and Share Feedback Print
 
ಐನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀಕಾಳಹಸ್ತಿ ದೇವಸ್ಥಾನದ ಗಾಳಿ ಗೋಪುರ (ರಾಜ ಗೋಪುರ)ವು ಬುಧವಾರ ಸಂಜೆ ಸಚಿವರ ಭರವಸೆಯ ಕೆಲವೇ ಕ್ಷಣಗಳ ಬಳಿಕ ಕುಸಿದು ಬೀಳುವುದರೊಂದಿಗೆ ಲೈಲಾ ಚಂಡಮಾರುತವು ತನ್ನ ಛಾಪು ಮೂಡಿಸಿ ಹೋಗಿದೆ. ಗೋಪುರ ಕುಸಿದಿರುವುದು ಅಪಶಕುನವಾಗಿದ್ದು, ಮುಂದೆ ಘೋರ ದುರಂತ ಕಾದಿದೆ ಎಂಬುದು ಭಕ್ತಾದಿಗಳ ಆತಂಕ.

ಗಾಳಿ ಗೋಪುರದಲ್ಲಿ ಬಿರುಕು ಕಾಣಿಸಿರುವುದರ ಬಗ್ಗೆ ಜನರು ಹಲವಾರು ಬಾರಿ ಸರಕಾರದ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಬಳಿಕ ಲೈಲಾ ಚಂಡಮಾರುತವೂ ಗಾಳಿ-ಮಳೆಯೊಂದಿಗೆ ಬಲವಾಗಿ ಬೀಸಿದ ಪರಿಣಾಮವಾಗಿ, ಗೋಪುರವು ಸಮೀಪದ ಅತಿಥಿಗೃಹವೊಂದರ ಮೇಲೆ ಬಿದ್ದಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.

ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡಲಾಗಿತ್ತಾದರೂ, ವಾರದ ಹಿಂದೆ ಬಂದಿದ್ದ ಗಾಳಿ-ಮಳೆಯಿಂದಾಗಿ ಗೋಪುರದ ಬಿರುಕು ಮತ್ತಷ್ಟು ಅಗಲವಾಗಿತ್ತು. ಬುಧವಾರ ಬೆಳಿಗ್ಗೆಯಷ್ಟೇ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಗೋಪುರದ ಮರುನಿರ್ಮಾಣ ಕಾರ್ಯಕ್ಕೆ ತಂತ್ರ ರೂಪಿಸುತ್ತಿದ್ದರು.

ಅಪರಾಹ್ನ, ಆಂಧ್ರಪ್ರದೇಶ ಕಾಂಗ್ರೆಸ್ ಸರಕಾರದ ಧಾರ್ಮಿಕ ದತ್ತಿ ಖಾತೆ ಸಚಿವ ಜಿ.ವೆಂಕಟ ರೆಡ್ಡಿ ಕೂಡ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ, ನಾವೇನೂ ಈ ದೇವಸ್ಥಾನದ ಬಗ್ಗೆ ನಿರ್ಲಕ್ಷ್ಯ ತಾಳಿಲ್ಲ. ಸರಕಾರವನ್ನು ಈ ಬಗ್ಗೆ ದೂರಬೇಕಾಗಿಲ್ಲ. ಗೋಪುರ ರಕ್ಷಿಸಿಕೊಳ್ಳಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದಿದ್ದರು. ಸಚಿವರ ಈ ಸ್ಪಷ್ಟನೆ ಬಂದ ಕೆಲವೇ ಗಂಟೆಗಳಲ್ಲಿ ಗೋಪುರ ಧರಾಶಾಯಿಯಾಗಿತ್ತು.

ಈ ಏಳಂತಸ್ತಿನ ಕಟ್ಟಡವನ್ನು 1516ರಲ್ಲಿ ವಿಜಯ ನಗರದ ದೊರೆ ಶ್ರೀ ಕೃಷ್ಣದೇವರಾಯನು ಗಜಪತಿ ಸಾಮ್ರಾಟರ ಮೇಲೆ ವಿಜಯ ಸಾಧಿಸಿದ ಬಳಿಕ ಕಟ್ಟಿಸಿದ್ದ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ