ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾರ್ಗಿಲ್ ವಿಜಯ ವಿಳಂಬವಾಗಿದ್ದೇಕೆ, ಗೊತ್ತೇ? (Kargil War | Operation Vijay | Devinder Singh | Indo Pak conflict | Armed Forces Tribunal)
Bookmark and Share Feedback Print
 
PTI
1999ರ ಕಾರ್ಗಿಲ್ ಯುದ್ಧದ ಸಂದರ್ಭ ಸೇನಾಧಿಕಾರಿಗಳು ಎಡವಿದ್ದು, ಅದರ ಚರಿತ್ರೆಯನ್ನೇ ತಿದ್ದಿ ಬರೆಯಬೇಕಾಗಿದೆ ಎಂದು ಸಶಸ್ತ್ರ ಪಡೆಗಳ ತನಿಖಾ ಮಂಡಳಿಯೊಂದು ಆದೇಶಿಸಿರುವುದರೊಂದಿಗೆ, ಭಾರತೀಯ ಸೇನೆ ತೀರಾ ಮುಜುಗರಕ್ಕೆ ಸಿಲುಕಿದೆ ಮಾತ್ರವಲ್ಲದೆ, ಒಳನುಸುಳಿದ್ದ ಪಾಕಿಸ್ತಾನೀ ಸೈನಿಕರು ಮತ್ತು ಉಗ್ರಗಾಮಿಗಳನ್ನು ಬಡಿದೋಡಿಸಲು ಭಾರತಕ್ಕೆ ಎರಡು ತಿಂಗಳು ಬೇಕಾಯಿತೇಕೆ ಎಂಬ ಪ್ರಶ್ನೆಗೂ ಉತ್ತರ ದೊರೆತಿದೆ.

ಕೆಲವು ಜನರಲ್‌ಗಳು 1999ರ ಮೇ-ಜುಲೈ ತಿಂಗಳಲ್ಲಿ ನಡೆದ ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಿರುಚಿದ್ದಾರೆ ಎಂದು ಅದು ತೀರ್ಪಿನಲ್ಲಿ ತಿಳಿಸಿದೆ. ಬಟಾಲಿಕ್ ಸೆಕ್ಟರ್ ನೇತೃತ್ವ ವಹಿಸಿದ್ದ ಬ್ರಿಗೇಡಿಯರ್ ದೇವಿಂದರ್ ಸಿಂಗ್ ನೀಡಿರುವ ವರದಿಯನ್ನು ಅವರ ಮೇಲಧಿಕಾರಿಗಳು ತಿದ್ದಿದ್ದಾರೆ ಎಂಬ ಆರೋಪಗಳಿದ್ದವು. ಮೇಲಧಿಕಾರಿ ಲೆಫ್ಟಿನೆಂಟ್ ಜನರಲ್ ಕಿಶನ್ ಪಾಲ್ ಅವರು ದೇವಿಂದರ್ ಅವರ ಹೋರಾಟದ ನಿರ್ವಹಣೆಯುಳ್ಳ ವರದಿಯನ್ನು ತಿರುಚಿದ್ದಾರೆ ಎಂದು ಹೇಳಲಾಗಿತ್ತು.

ಬಟಾಲಿಕ್ ವಲಯದಲ್ಲಿ 70 ಇನ್ಫೆಂಟ್ರಿ ಬ್ರಿಗೇಡ್ ನೇತೃತ್ವ ವಹಿಸಿದ್ದ ಈಗ ನಿವೃತ್ತರಾಗಿರುವ ಬ್ರಿಗೇಡಿಯರ್ ದೇವಿಂದರ್ ಸಿಂಗ್ ಸಾಧನೆಯನ್ನು ಮುಚ್ಚಿ ಹಾಕಲಾಗಿರುವುದರಿಂದ ಅವರಿಗೆ ರಾಷ್ಟ್ರೀಯ ಬಡ್ತಿ ನೀಡಬೇಕು ಎಂದು ಶಿಫಾರಸು ಮಾಡಲಿದೆ. ದೇವಿಂದರ್ ಅವರು ತನ್ನ ಯುದ್ಧ ನಿರ್ವಹಣೆ ಕುರಿತು ತಪ್ಪು ವರದಿ ನೀಡಲಾಗಿರುವ ಕುರಿತು ದೆಹಲಿ ಹೈಕೋರ್ಟಿನ ಮೊರೆ ಹೋಗಿದ್ದರು.

ಆ ಸೆಕ್ಟರಿನಲ್ಲಿ ದಂಡನಾಯಕರಾಗಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆ.ಜ. ಕಿಶನ್ ಪಾಲ್ ಅವರು ವರದಿ ತಿರುಚಿದ ಕಾರಣದಿಂದಾಗಿ, ದೇವಿಂದರ್ ಸಿಂಗ್‌ಗೆ ಶೌರ್ಯ ಪ್ರಶಸ್ತಿ ಮಾತ್ರವಲ್ಲದೆ ಮೇಜರ್ ಜನರಲ್ ಆಗುವ ಬಡ್ತಿಯೂ ತಪ್ಪಿ ಹೋಗಿತ್ತು.

ಕಾರ್ಗಿಲ್ ಯುದ್ಧೋನ್ಮಾದ ಪರಾಕಾಷ್ಠೆಗೇರುವ ಮೊದಲೇ ಉಗ್ರರು, ವೈರಿಗಳ ಒಳ ನುಸುಳುವಿಕೆ ಕುರಿತು ಎಚ್ಚರಿಕೆ ನೀಡಿದ್ದ ಬ್ರಿ.ದೇವಿಂದರ್ ಸಿಂಗ್, ಬಟಾಲಿಕ್ ಸಹಿತ ಕಾರ್ಗಿಲ್-ದ್ರಾಸ್ ಮುಂಚೂಣಿ ಪ್ರದೇಶದಲ್ಲಿ ಸುಮಾರು 600ರಷ್ಟು ಪಾಕ್ ಸೈನಿಕರು ಒಳನುಸುಳಿದ್ದರು ಎಂದು ಮಾಹಿತಿ ನೀಡಿದ್ದರು. ಆದರೆ ಈ ಅಂಕಿ ಅಂಶವನ್ನು 45 ಮಂದಿ ಉಗ್ರರು ಎಂದು ಲೆ.ಜ. ಪಾಲ್ ಬದಲಾಯಿಸಿದ್ದರು. ಈ ತಪ್ಪು ಲೆಕ್ಕಾಚಾರದಿಂದಾಗಿಯೇ, 48 ಗಂಟೆಗಳಲ್ಲಿ ಕಾರ್ಗಿಲ್‌ನಲ್ಲಿ ಉಗ್ರರನ್ನು ಮುಗಿಸಬಹುದು ಎಂದು ಸರಕಾರವು ತಪ್ಪು ಅಂದಾಜು ಮಾಡಲು ಕಾರಣವಾಗಿತ್ತು ಎನ್ನಲಾಗುತ್ತಿದೆ. ಅದೇ ರೀತಿ, 15 ಕಾರ್ಪ್ಸ್ ಪಡೆಯ ಅಡಿಯಲ್ಲಿ ಬರುವ 3 ಇನ್ಫೆಂಟ್ರಿ ವಿಭಾಗದ ಡೆಪ್ಯುಟಿಯಾಗಿದ್ದ ಬ್ರಿಗೇಡಿಯರ್ ಅಶೋಕ್ ದುಗ್ಗಲ್ ಅವರು ಸ್ಟಾಂಗ್‌ಬಾ-ಖಲುಬರ್ ಕಣಿವೆಯ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು ಎಂದು ವರದಿ ಸಲ್ಲಿಸಲಾಗಿತ್ತು. ವಾಸ್ತವವಾಗಿ, ಇದರ ನೇತೃತ್ವವನ್ನು ಬ್ರಿ.ದೇವಿಂದರ್ ಸಿಂಗ್ ವಹಿಸಿದ್ದರು, ದುಗ್ಗಲ್ ಇದ್ದದ್ದು 72 ಗಂಟೆ ಮಾತ್ರ ಎಂದು ಆ ವಿಭಾಗದ ಕಮಾಂಡರ್ ಮೇ.ಜ.ವಿ.ಎಸ್.ಬುಧ್ವಾರ್ ಅವರು ಮಂಡಳಿಯೆದುರು ಸಾಕ್ಷಿ ನೀಡಿದ್ದರು.

ದೇವಿಂದರ್‌ಗೆ ಆಗಿದ್ದ ಅನ್ಯಾಯ ಇಷ್ಟು ಮಾತ್ರವೇ ಅಲ್ಲ. ಯುದ್ಧಕಾಲದ ಶೌರ್ಯಕ್ಕಾಗಿ ಅವರಿಗೆ ಎರಡನೇ ಅತ್ಯುನ್ನತ ಪುರಸ್ಕಾರವಾಗಿರುವ ಮಹಾವೀರ ಚಕ್ರ ಕೊಡಲು ಶಿಫಾರಸು ಮಾಡಲಾಗಿತ್ತು. ಆದರೆ, ಲೆ. ಜ. ಪಾಲ್ ಅವರು ದೇವಿಂದರ್ ಸಿಂಗ್‌ರ ಯುದ್ಧ ನಿರ್ವಹಣಾ ವರದಿಯನ್ನು ತಿರುಚಿದ ಬಳಿಕ, ಸಾಮಾನ್ಯವಾಗಿ ಶಾಂತಿ ಕಾಲದ ಕರ್ತವ್ಯಕ್ಕಾಗಿ ಕೊಡಲಾಗುವ ವಿಶಿಷ್ಟ ಸೇವಾ ಪದಕವನ್ನಷ್ಟೇ ನೀಡುವಂತೆ ಮಾಡಲಾಗಿತ್ತು.

ಇದೀಗ ದೇವಿಂದರ್ ಪರವಾಗಿ ಹಲವು ಸೈನಿಕರು, ಅಧಿಕಾರಿಗಳು ಸಾಕ್ಷಿ ನೀಡಿದ ಪರಿಣಾಮ, ಮಂಡಳಿಯು ಇದೀಗ ಕಾರ್ಗಿಲ್ ಇತಿಹಾಸ ಮರುಲಿಖಿತವಾಗಬೇಕು ಎಂದು ಆದೇಶಿಸಿದೆ.

ಸೇನಾ ಮುಖ್ಯಾಲಯವು ಈ ಶಿಫಾರಸನ್ನು ಒಪ್ಪಿಕೊಳ್ಳಬಹುದು ಇಲ್ಲವೇ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬಹುದಾಗಿದೆ. ಅದು ಒಪ್ಪದಿದ್ದರೆ ಬ್ರಿ.ಸಿಂಗ್ ಅವರೇ ಸುಪ್ರೀಂ ಕೋರ್ಟಿಗೆ ಹೋಗಬಹುದು.

ಇದರೊಂದಿಗೆ, ಕಾರ್ಗಿಲ್ ಯುದ್ಧ ಕಾಲದ ತೀವ್ರತೆಯನ್ನು ಅಳೆಯುವಲ್ಲಿ ವೈಫಲ್ಯವಾಗಿದ್ದು ಎಲ್ಲಿ ಎಂಬ ಹುಳುಕುಗಳು ಹೊರಬರಲಾರಂಭಿಸಿದೆ. ಮಾತ್ರವಲ್ಲದೆ, ಇದರ ತೀವ್ರತೆ ಅರಿಯಲು ವಿಫಲವಾದ ಕಾರಣಕ್ಕೆ ಉಚ್ಚಾಟನೆಗೊಂಡಿದ್ದ ಬೆಟಾಲಿಯನ್ ಕಮಾಂಡರ್ ಬ್ರಿ.ಸುರಿಂದರ್ ಸಿಂಗ್, ಕರ್ನಲ್ ನೀರಜ್ ಮೆಹ್ರಾ ಮತ್ತು ಸಿಯಾಚಿನ್ ವಲಯದಲ್ಲಿ ಸಮರಭೂಮಿಯಿಂದ ಓಡಿಹೋದ ಆರೋಪದಲ್ಲಿ ಕೋರ್ಟ್ ಮಾರ್ಷಲ್‌ಗೀಡಾಗಿ, ಸೇವೆಯಿಂದ ವಜಾಗೊಳಿಸಲ್ಪಟ್ಟ ಮೇಜರ್ ಮನೀಶ್ ಭಟ್ನಾಗರ್ ಅವರ ಪ್ರಕರಣಗಳೂ ಮರು ವಿಚಾರಣೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ