ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರ: ಜಗನ್ ರೆಡ್ಡಿ ಯಾತ್ರೆ-ಭುಗಿಲೆದ್ದ ಹಿಂಸಾಚಾರ, 1 ಬಲಿ (Jaganmohan Reddy | Congress | Hyderabad | Telangana)
Bookmark and Share Feedback Print
 
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ.ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರ, ಕಡಪಾ ಸಂಸದ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಾರಂಗಲ್ ಜಿಲ್ಲೆಯ ಮೆಹಬೂಬಾಬಾದ್‌ನಿಂದ ಹಮ್ಮಿಕೊಂಡಿದ್ದ ಸಾಂತ್ವನ ಯಾತ್ರೆಗೆ ತೆಲಂಗಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುವ ಮೂಲಕ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಮುನ್ನೆಚ್ಚರಿಕೆ ಅಂಗವಾಗಿ ಜಗನ್‌ ಅವರನ್ನು ಗೃಹ ಬಂಧನಕ್ಕೊಳಪಡಿಸಿದ್ದು, ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.

ತಂದೆ ವೈ.ಎಸ್.ಆರ್. ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಹಲವಾರು ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗೆ ಆತ್ಮಹತ್ಯೆ ಮಾಡಿಕೊಂಡ ಸುಮಾರು 77 ಕುಟುಂಬಗಳಿಗೆ ಸಾಂತ್ವನ ಹೇಳಲು ಜಗನ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ಇದಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಹಾಗೂ ರಾಜ್ಯ ಕಾಂಗ್ರೆಸಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಕೂಡ ಜಗನ್ ವಿರೋಧದ ನಡುವೆಯೂ ಸಾಂತ್ವನ ಯಾತ್ರೆಗೆ ಚಾಲನೆ ನೀಡಿದ್ದರು.

ಆರು ದಿನಗಳ ಈ ಯಾತ್ರೆಯನ್ನು ಹೈದರಾಬಾದ್, ಗುಂಟೂರ್ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಜಗನ್ ಕೈಗೊಂಡಿದ್ದರು. ಆದರೆ ತೆಲಂಗಾಣದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುವ ಮೂಲಕ ಜಗನ್ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಹೊಯ್ ಕೈ ನಡೆದು, ತೀವ್ರ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸಂದರ್ಭದಲ್ಲಿ ಜಗನ್ ಅಂಗರಕ್ಷಕರು ನಡೆಸಿದ ಫೈರಿಂಗ್‌ನಲ್ಲಿ ಬಹುಜನ್ ಸ್ಟೂಡೆಂಟ್ ಫೆಡರೇಷನ್ ಕಾರ್ಯಕರ್ತ ಪ್ರಫುಲ್ ರಾಜು ಸಾವನ್ನಪ್ಪಿದ್ದಾರೆ. ಹತ್ತು ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಏತನ್ಮಧ್ಯೆ ಪರಿಸ್ಥಿತಿಯನ್ನು ಹತೋಟಿಗೆ ತರುವ ನೆಲೆಯಲ್ಲಿ ಜಗನ್ ಅವರನ್ನು ವಂಗಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದು, ಅವರನ್ನು ಹೈದರಾಬಾದ್‌‌ನ ಬಂಜಾರ್‌ಹಿಲ್ಸ್‌ಗೆ ತಂದು ಗೃಹಬಂಧನದಲ್ಲಿ ಇರಿಸಿದ್ದರು. ನಂತರ ಅವರನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ಡಿಜಿಪಿ ಗಿರೀಶ್ ತಿಳಿಸಿದ್ದಾರೆ.

ಸಾಂತ್ವನ ಯಾತ್ರೆ ಸಂದರ್ಭದಲ್ಲಿ ಉಂಟಾದ ಉದ್ವಿಗ್ನ ಸ್ಥಿತಿಯಿಂದಾಗಿ ಮೆಹಬೂಬಾಬಾದ್ ರೈಲ್ವೆ ನಿಲ್ದಾಣ ರಣರಂಗವಾಗಿತ್ತು. ಎಲ್ಲೆಡೆ ಕಲ್ಲು ತೂರಾಟ, ರೈಲಿನ ಗಾಜು, ಕಿಟಕಿಗಳನ್ನು ಪುಡಿಗೈದಿದ್ದರು. ರೈಲ್ವೆ ನಿಲ್ದಾಣದಲ್ಲಿನ ಟಿವಿ ಸೆಟ್ಸ್, ಮೈಕ್‌ಗಳನ್ನು ಒಡೆದು ಹಾಕಿದ್ದರು. ಸುಮಾರು 14 ರೈಲು ಸಂಚಾರಗಳನ್ನು ರದ್ದುಗೊಳಿಸಲಾಗಿದೆ. ಸ್ಥಳದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಖ್ವಾಸಿಮ್ ವಿವರಿಸಿದ್ದಾರೆ.

ಮಾಜಿ ಸಚಿವೆಯಿಂದ ಆತ್ಮಹತ್ಯೆಗೆ ಯತ್ನ: ಯಾತ್ರೆಯ ಸಂದರ್ಭದಲ್ಲಿ ಮಾಜಿ ಸಚಿವೆ ಸುರೇಖಾ ಅವರು ಸಹಾಯಕರ ಬಳಿ ನೀರು ತೆಗೆದುಕೊಂಡು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚೀತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಯಾತ್ರೆ ನಿಲ್ಲಲ್ಲ-ಜಗನ್ ಘೋಷಣೆ: ನಾನು ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ, ಆದರೆ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಕುತಂತ್ರ ನಡೆಸಿ, ಯಾತ್ರೆಯನ್ನು ತಡೆಯುವ ಸಂಚು ನಡೆಸಲಾಗಿದೆ ಎಂದು ಆರೋಪಿಸಿರುವ ಜಗನ್, ಯಾವುದೇ ಕಾರಣಕ್ಕೂ ಯಾತ್ರೆ ನಿಲ್ಲಲ್ಲ ಎಂದು ಗುಡುಗಿದ್ದಾರೆ. ತಾನು 77 ಕುಟುಂಬಗಳಿಗೆ ಸಾಂತ್ವಾನ ಹೇಳಿಯೇ ಸಿದ್ಧ ಎಂದು ಪಣ ತೊಟ್ಟಿದ್ದಾರೆ.

ಯಾತ್ರೆ ವಿರೋಧಿಸಿ ಬಿಜೆಪಿ ಕಾರ್ಯಕರ್ತನಿಂದ ಆತ್ಮಹತ್ಯೆಗೆ ಯತ್ನ: ಯಾವುದೇ ಕಾರಣಕ್ಕೂ ಜಗನ್ ಯಾತ್ರೆ ಕೈಗೊಳ್ಳಬಾರದು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತ ನಾಗರಾಜು ಎಂಬಾತ, ರೈಲ್ವೆ ನಿಲ್ದಾಣದಲ್ಲಿ ಬ್ಲೇಡ್‌ನಿಂದ ತನ್ನ ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ನಡೆಯಿತು. ಕೂಡಲೇ ಆತನನ್ನು ತಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ನಾಗರಾಜು ಸ್ಥಿತಿ ಗಂಭೀರವಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮತ್ತೊಬ್ಬ ತೆಲಂಗಾಣ ಪರ ಹೋರಾಟಗಾರ ಎಂ.ಡಿ.ಶಾಬ್ಬೀರ್ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ತಡೆದಿದ್ದರು. ಎರಡು ಆರ್‌ಟಿಸಿ ಬಸ್‌ಗಳಿಗೆ ತೆಲಂಗಾಣ ಪರ ಹೋರಾಟಗಾರರು ಬೆಂಕಿ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರಕ್ಕೆ ತಲೆನೋವಾದ ಜಗನ್: ಕಾಂಗ್ರೆಸ್ ವಿರೋಧದ ನಡುವೆಯೂ ವೈಯಕ್ತಿಕ ಪ್ರತಿಷ್ಠೆಗಾಗಿ ಸಾಂತ್ವಾನ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ತಂದೊಡ್ಡಿದ್ದಾರೆ. ಆ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಮಸ್ಯೆಯ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ