ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಜಾರ್ಖಂಡ್ ಸರ್ಕಾರ ಇದೀಗ ಅತಂತ್ರ ಸ್ಥಿತಿಗೆ ತಲುಪಿದ್ದು, ರಾಜ್ಯಪಾಲರ ಸೂಚನೆಯಂತೆ ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್ ಮತ್ತು ಜೆವಿಎಂ(ಪಿ) ಪಕ್ಷಗಳ ಬೆಂಬಲ ಪಡೆಯುವಲ್ಲಿ ವಿಫಲವಾಗಿರುವ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೆನ್ ಭಾನುವಾರ ರಾತ್ರಿ ಕೊನೆಗೂ ರಾಜೀನಾಮೆ ಸಲ್ಲಿಸಿದ್ದಾರೆ.
ಸೊರೆನ್ ಭಾನುವಾರ ರಾತ್ರಿ ಗವರ್ನರ್ ಎಓಎಚ್ ಫಾರೂಕ್ ಅವರನ್ನು ಭೇಟಿಯಾಗಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 82 ಸದಸ್ಯ ಬಲ ಹೊಂದಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಶಿಬು ಕೇವಲ 25ಶಾಸಕರ ಬೆಂಬಲವನ್ನಷ್ಟೇ ಹೊಂದಿದ್ದಾರೆ. ಹಾಗಾಗಿ ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸಲು ಶಿಬುಗೆ 42 ಶಾಸಕರ ಬೆಂಬಲದ ಅಗತ್ಯವಿತ್ತು.
ಆ ನಿಟ್ಟಿನಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಶಿಬುಗೆ ಸೂಚಿಸಿದ್ದಾರೆ. ಒಟ್ಟಾರೆ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಬೆಲೆ ಏರಿಕೆ ಸಂದರ್ಭದಲ್ಲಿ ಸಂಸತ್‌ನಲ್ಲಿ ವಿರೋಧ ಪಕ್ಷಗಳು ಆಡಳಿತಾರೂಢ ಯುಪಿಎ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ವೇಳೆ ಶಿಬು ಸೊರೆನ್ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಆ ಸಂದರ್ಭದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನಿಂದಾಗಿ, ಜಾರ್ಖಂಡ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದೆತೆಗೆದು ಕೊಂಡಿತ್ತು. ಅಂತೂ ಹಗ್ಗಜಗ್ಗಾಟ ನಡೆದು ಕೊನೆಗೂ ರಾಜೀ ಸಂಧಾನ ನಡೆದು ಮೊದಲ 28ತಿಂಗಳ ಕಾಲ ಬಿಜೆಪಿಯ ಮುಂಡಾ ಅವರು ಮುಖ್ಯಮಂತ್ರಿಯಾಗುವುದಾಗಿ ನಿರ್ಧರಿಸಲಾಗಿತ್ತು. ಆದರೆ ಉಲ್ಟಾ ಹೊಡೆದ ಶಿಬು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ ಪರಿಣಾಮ, ಬಿಜೆಪಿ ಶಿಬು ಸಹವಾಸವೇ ಬೇಡ ಎಂದು ಬೆಂಬಲವನ್ನು ವಾಪಸ್ ತೆಗೆದುಕೊಂಡಿತ್ತು.
ಜಾರ್ಖಂಡ್‌ನಲ್ಲಿ ಬಿಜೆಪಿ 18 ಶಾಸಕರನ್ನು ಹೊಂದಿದ್ದು, ಅದರಲ್ಲಿ ಇಬ್ಬರು ಜೆಡಿಯು ಶಾಸಕರ ಬೆಂಬಲವೂ ಸೇರಿದೆ. ಅಂತೂ ಐದು ತಿಂಗಳ ಕಾಲಾವಧಿಯ ಬಿಜೆಪಿ-ಜೆಎಂಎಂ ನೇತೃತ್ವದ ಸರ್ಕಾರ ಪತನಗೊಂಡಂತಾಗಿದೆ.