ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾವ ತಪ್ಪೂ ಮಾಡಿಲ್ಲ, ಕಾಂಗ್ರೆಸ್ ತೊರೆಯಲ್ಲ: ಜಗನ್ ರೆಡ್ಡಿ (Congress | Jaganmohan Reddy | Andhra Pradesh | Sonia Gandhi)
ಯಾವ ತಪ್ಪೂ ಮಾಡಿಲ್ಲ, ಕಾಂಗ್ರೆಸ್ ತೊರೆಯಲ್ಲ: ಜಗನ್ ರೆಡ್ಡಿ
ನವದೆಹಲಿ, ಸೋಮವಾರ, 31 ಮೇ 2010( 12:43 IST )
ಹೈಕಮಾಂಡ್ ವಿರೋಧದ ನಡುವೆಯೂ ಸಾಂತ್ವನ ಯಾತ್ರೆ ಹಮ್ಮಿಕೊಂಡು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿರುವ ಸಂಸದ ವೈ.ಎಸ್.ಜಗನ್ ಮೋಹನ್ ರೆಡ್ಡಿ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೇ ತನ್ನ ಯಾತ್ರೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಂತ್ವನ ಯಾತ್ರೆ ಕುರಿತಂತೆ ಸೋಮವಾರ ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದಾಗ ನೂರಾರೂ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಆ ನಿಟ್ಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಲು ಜಗನ್ ಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಯಾತ್ರೆಗೆ ಕಾಂಗ್ರೆಸ್ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿತ್ತು. ತೆಲಂಗಾಣ ಪರ ಹೋರಾಟಗಾರರು ಯಾತ್ರೆಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಹಿಂಸಾಚಾರ ಸಂಭವಿಸಿತ್ತು.
ಆಂಧ್ರ ಕಾಂಗ್ರೆಸ್‌ನಲ್ಲಿ ತಲೆನೋವಾಗಿ ಪರಿಣಮಿಸಿರುವ ಜಗನ್ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಏತನ್ಮಧ್ಯೆ ತಾನು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಜಗನ್ ಹೇಳಿದ್ದಾರೆ. ತನ್ನ ಯಾತ್ರೆಯ ಹಿಂದೆ ದುರುದ್ದೇಶವಿಲ್ಲ, ಅದೊಂದು ಭಾವನಾತ್ಮಕ ಯಾತ್ರೆಯಾಗಿದೆ ಎಂದಿರುವ ಅವರು, ನನ್ನ ಯಾತ್ರೆಯನ್ನು ಮುಂದುವರಿಸಲು ಕಾಂಗ್ರೆಸ್ ಅನುವು ಮಾಡಿಕೊಡಬೇಕೆಂದು ಪಕ್ಷದ ವರಿಷ್ಠರಲ್ಲಿ ಕೇಳಿಕೊಳ್ಳುವುದಾಗಿ ಸಿಎನ್‌ಎನ್-ಐಬಿಎನ್‌ಗೆ ತಿಳಿಸಿದ್ದಾರೆ.
ನಾನು ತಪ್ಪು ಮಾಡಿಲ್ಲ, ಹಾಗಾಗಿ ಕಾಂಗ್ರೆಸ್ ನನ್ನ ವಿರುದ್ಧ ಯಾವುದೇ ರೀತಿ ಶಿಸ್ತು ಕ್ರಮ ಜರಗಿಸುತ್ತದೆ ಎಂಬುದನ್ನು ಯೋಚಿಸಲಾರೆ ಎಂದರು. ಇದು ನನ್ನ ವೈಯಕ್ತಿಕ ಯಾತ್ರೆ, ಕಾಂಗ್ರೆಸ್‌ಗೂ ಯಾತ್ರೆಗೂ ಸಂಬಂಧವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು. ಆದರೂ ತಾನು ಪಕ್ಷದ ವರಿಷ್ಠೆ ಸೋನಿಯಾಗಾಂಧಿಯನ್ನು ತುಂಬಾ ಗೌರವಿಸುವುದಾಗಿ ತಿಳಿಸಿದರು.