ಇಲ್ಲಿನ ಡಿಎಲ್ಎಫ್ ಸಿಟಿ ನಿವಾಸಿಯೊಬ್ಬರ ಮೇಲೆ ತನ್ನ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ. ಇದರಲ್ಲೇನು ವಿಶೇಷ ಅಂತೀರಾ? ವಿಶೇಷವಿದೆ. ಈ ಆರೋಪಿಯ ವಯಸ್ಸು 82 ವರ್ಷ!
ಕೇಸು ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿಲ್ಲ. ಆದರೆ ಆತನ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಈ ಆರೋಪಗಳು ನಿರಾಧಾರ ಎಂದು ಈ ವೃದ್ಧನ ಕುಟುಂಬಿಕರು ಹೇಳಿದ್ದಾರೆ. 'ಈ ಮನೆ ಕೆಲಸದಾಕೆಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಮತ್ತು ಇಲ್ಲಿಂದ ಹೋಗಲು ಏನಾದರೂ ಕಾರಣ ಹುಡುಕುತ್ತಿದ್ದಳು' ಎಂದು ಕುಟುಂಬಿಕರು ತಿಳಿಸಿದ್ದಾರೆ. ಮನೆಕೆಲಸದಾಕೆ ಸುಮಾರು 18-19ರ ಪ್ರಾಯದವಳು.
ಮೇ 27ರಂದು ಅತ್ಯಾಚಾರ ಮಾಡಲಾಗಿದೆ ಎಂದು ಎರಡು ದಿನಗಳ ಬಳಿಕ ದಾಖಲಾದ ಎಫ್ಐಆರ್‌ನಲ್ಲಿ ಹೇಳಲಾಗಿದೆ. ಆರೋಪಿಯು ಕೆಲಸದಾಕೆಯನ್ನು ತಬ್ಬಿ ಹಿಡಿದು, ತನ್ನ ಬೆಡ್‌ರೂಮಿಗೆ ಎಳೆದುಕೊಂಡು ಹೋಗಿ, ಅತ್ಯಾಚಾರ ಮಾಡಿದ್ದಾನೆ ಎಂದು ನಮೂದಿಸಲಾಗಿದೆ. ಆದರೆ ಈ ವಯೋವೃದ್ಧನಿಗೆ ಇಷ್ಟು ಶಕ್ತಿ ಇರಬಹುದೇ? ಎಂಬುದು ಶಂಕೆಗೆ ಕಾರಣವಾಗಿರುವ ಅಂಶ.
ಆದರೆ, ಪ್ರಕರಣ ದಾಖಲಿಸಲು ವಿಳಂಬವಾಗಿರುವುದರಿಂದಾಗಿ, ವೈದ್ಯಕೀಯ ಪರೀಕ್ಷೆ ವೇಳೆ, ನೆಗೆಟಿವ್ ರಿಪೋರ್ಟ್ ಬಂದಿರಬಹುದು ಎನ್ನುತ್ತಾರೆ ಪೊಲೀಸರು. ಅಂತೆಯೇ, ಈ ವೃದ್ಧನ ಮೇಲೆ ನಡೆಸಲಾಗಿರುವ ವೈದ್ಯಕೀಯ ಪರೀಕ್ಷೆ ವೇಳೆ, 'ಲೈಂಗಿಕವಾಗಿ ಈತ ಸಮರ್ಥ' ಎಂಬ ವರದಿ ಬಂದಿದೆ.
ತನಿಖೆ ಮುಂದುವರಿದಿದ್ದು, ಎನ್‌ಜಿಒ ಕೌನ್ಸೆಲರ್‌ಗಳು ಅತ್ಯಾಚಾರದ ಬಲಿಪಶು ಮನೆಕೆಲಸದಾಕೆಯ ಜೊತೆ ಮಾತುಕತೆ ನಡೆಸುತ್ತಿದ್ದು, ಸತ್ಯಾಂಶ ಬಯಲಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ.