ಬಿಹಾರದಲ್ಲಿಯೂ ಭಾರತೀಯ ಜನತಾಪಕ್ಷ ಮುಜುಗರಕ್ಕೀಡಾಗುವ ಪ್ರಸಂಗ ಎದುರಾಗಿದ್ದು, ಪಕ್ಷದ ಹಿರಿಯ ಶಾಸಕರೊಬ್ಬರು ಪುರ್ನಿಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಇಲ್ಲಿನ ಖಾಸಗಿ ಶಾಲೆಯೊಂದರ 35ರ ಹರೆಯದ ಶಿಕ್ಷಕಿಯೊಬ್ಬರು ಬಿಜೆಪಿ ಶಾಸಕ ರಾಜ್ ಕಿಶೋರ್ ಕೇಸರಿ ಮತ್ತು ಆತನ ನಿಕಟವರ್ತಿಗಳು ಸುಮಾರು ಮೂರು ವರ್ಷಗಳ ಕಾಲ ಅತ್ಯಾಚಾರ ನಡೆಸಿರುವುದಾಗಿ ದೂರು ದಾಖಲಿಸಿದ್ದಾರೆಂದು ಪುರ್ನಿಯಾ ಡಿಐಜಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಶಿಕ್ಷಕಿ ಕಳೆದ ಮೂರು ದಿನಗಳ ಹಿಂದೆ ಖಾಜಾನ್‌ಚಿಹಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಠಾಣೆಯ ಅರವಿಂದ್ ಕುಮಾರ್ ಅವರು ಡಿಎಸ್‌ಪಿ ಎಸ್.ಎಸ್.ಠಾಕೂರ್ ಅವರ ಮುಂದಾಳತ್ವದಲ್ಲಿ ತನಿಖೆ ನಡೆಸುತ್ತಿರುವುದಾಗಿ ಕುಮಾರ್ ವಿವರಿಸಿದ್ದಾರೆ.
ಆದರೆ ಅತ್ಯಾಚಾರ ಆರೋಪವನ್ನು ಶಾಸಕ ಕೇಸರಿ ತಿರಸ್ಕರಿಸಿದ್ದು, ಇದು ಅಪ್ಪಟ ಸುಳ್ಳು ಮತ್ತು ಆಧಾರರಹಿತವಾಗಿದೆ. ಇದೊಂದು ರಾಜಕೀಯ ಪ್ರೇರಿತ ಎಂದು ತಿಳಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತನ್ನ ತೇಜೋವಧೆ ಮಾಡಲು ಈ ಸಂಚನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ ಎಂದು ಕೇಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರ್ನಿಯಾ ಕ್ಷೇತ್ರದ ಶಾಸಕರಾಗಿರುವ ಕೇಸರಿ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಅತ್ಯಾಚಾರ ಆರೋಪವನ್ನು ಎದುರಿಸಿದಂತಾಗಿದೆ. ಈ ಮೊದಲು 2008ರಲ್ಲಿಯೂ ಕೇಸರಿ ಅತ್ಯಾಚಾರ ಎಸಗಿದ್ದಾರೆಂದು ಮಹಿಳೆಯೊಬ್ಬಳು ಆರೋಪಿಸಿದ್ದಳು. ಪ್ರಕರಣದಲ್ಲಿ ಪೊಲೀಸ್ ತನಿಖೆ ನಂತರ ಕ್ಲೀನ್ ಚಿಟ್ ನೀಡಲಾಗಿತ್ತು. ಇದೀಗ ಶಿಕ್ಷಕಿಯೊಬ್ಬರು ತನ್ನ ಮೇಲೆ ಶಾಸಕ ಕೇಸರಿ ಅತ್ಯಾಚಾರ ನಡೆಸಿದ್ದಾರೆಂದು ದೂರು ನೀಡಿರುವುದು ಇಕ್ಕಟ್ಟಿಗೆ ಸಿಲುಕಿಸಿದೆ.
ಈಗಾಗಲೇ ಕರ್ನಾಟದಲ್ಲಿಯೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಹಾಲಪ್ಪ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಜಾಮೀನು ಮಾತ್ರ ಇನ್ನೂ ಸಿಕ್ಕಿಲ್ಲ.