ಕಳೆದ ವರ್ಷದ ಬರಗಾಲದಿಂದ ಕಂಗೆಟ್ಟಿದ್ದ ರೈತನ ಮುಖದಲ್ಲಿ ಮಂದಹಾಸ ಬೀರಿದ್ದು, ನಿರೀಕ್ಷಿತ ನೈರುತ್ಯ ಮಾನ್ಸೂನ್ ಮಾರುತಗಳು ಇದೀಗ ಕೇರಳವನ್ನು ತಲುಪಿದ್ದು, ಇನ್ನೊಂದು ದಿನದಲ್ಲಿ ಕರ್ನಾಟಕದ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ಆದರೆ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗುವುದು ಈ ಬಾರಿ ತಡವಾಗಲಿದೆ ಎಂದು ಅವರು ತಿಳಿಸಿದ್ದಾರೆ. ನೈರುತ್ಯ ಮಾನ್ಸೂನ್ ಕೇಳರಕ್ಕೆ ಕಾಲಿಟ್ಟಿದ್ದು, ಕರ್ನಾಟಕ ಕರಾವಳಿ ಪ್ರದೇಶಕ್ಕೆ ಇನ್ನು ಒಂದು ದಿನದೊಳಗೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಅಜಿತ್ ತ್ಯಾಗಿ ಹೇಳಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಿದ್ದು, ಅದು ದಿನಕ್ರಮೇಣ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಇದರಿಂದ ಮಾನ್ಸೂನ್ ಮಾರುತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ವಾಯುಭಾರಕುಸಿತವು ಚಂಡಮಾರುತವಾಗಿ ರೂಪುಗೊಂಡು ಗುಜರಾತ್ ನ ಕರಾವಳಿ ಪ್ರದೇಶಗಳು ಹಾಗೂ ಪಾಕಿಸ್ತಾನದ ಕರಾಚಿ ಮೇಲೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಮೂಲಕ ಇಳುವರಿ ಹೆಚ್ಚಲಿದ್ದು, ಹಣದುಬ್ಬರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇರುವುದಾಗಿ ತಜ್ಞರು ವಿಶ್ವಾಸವ್ಯಕ್ತಪಡಿಸಿದ್ದಾರೆ.