ಪಾಕಿಸ್ತಾನದ ಐಎಸ್ಐಗೆ ರಹಸ್ಯ ಮಾಹಿತಿ ನೀಡಿದ ಆರೋಪದ ಮೇಲೆ ಸೆರೆಸಿಕ್ಕಿದ್ದ ಭಾರತದ ನೌಕಪಡೆಯ ಮೆಕ್ಯಾನಿಕ್ ಚಾಂದ್ ಕುಮಾರ್ ಪ್ರಸಾದ್‌ಗೆ ದೆಹಲಿ ಕೋರ್ಟ್ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
ಬಂಧಿತ ಚಾಂದ್ ಕುಮಾರನನ್ನು ಐದು ದಿನಗಳ ಕಾಲ ತನಿಖೆಯ ನಂತರ ಪೊಲೀಸ್ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಖ್ಯನ್ಯಾಯಮೂರ್ತಿ ಕಾವೇರಿ ಬವೇಜಾ ಅವರು, ಆತನಿಗೆ ಜೂನ್ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.
ದೇಶದ್ರೋಹದ ಆರೋಪದ ಮೇಲೆ ಮಾಧುರಿ ಗುಪ್ತಾ ಸೆರೆ ಸಿಕ್ಕ ಘಟನೆ ಮರೆಯುವ ಮನ್ನವೇ, ಇದೀಗ ಪಾಕಿಸ್ತಾನದ ಐಎಸ್ಐಗೆ ರಹಸ್ಯ ಮಾಹಿತಿ ನೀಡಿದ ಆರೋಪದ ಮೇಲೆ ಭಾರತದ ನೌಕಾಪಡೆಯ ಉದ್ಯೋಗಿಯಾಗಿದ್ದ ಚಾಂದ್‌ನನ್ನು ಪೊಲೀಸರು ಮೇ 26ರಂದು ಸೆರೆಹಿಡಿದಿದ್ದರು.
ಬಂಧಿತನಿಂದ ಹಿಂದಾನ್ ಏರ್ ಬೇಸ್‌ನ ಫೋಟೋಗ್ರಾಫ್ಸ್, ಮೀರತ್ ಕಂಟೋನ್ಮೆಂಟ್ ಮ್ಯಾಪ್ ಹಾಗೂ ಕೆಲವು ರಹಸ್ಯ ಮತ್ತು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಪ್ರಸಾದ್ ಮಹತ್ವದ ಮಾಹಿತಿಗಳನ್ನು ಮತ್ತೊಬ್ಬ ವ್ಯಕ್ತಿಯಿಂದ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ರವಾನಿಸುತ್ತಿದ್ದ ಎಂದು ಪೊಲೀಸರು ಗಂಭೀರವಾಗಿ ಆರೋಪಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪ್ರಸಾದ್‌ನನ್ನು ಬಂಧಿಸಿದ್ದ ಅಧಿಕಾರಿಗಳು ಮೇ27 ರಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಅಲ್ಲದೇ ಆತನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು.