ಲಖೀಂಪುರ(ಅಸ್ಸಾಂ), ಮಂಗಳವಾರ, 1 ಜೂನ್ 2010( 09:36 IST )
PTI
ಮುಂಗಾರು ಮಳೆ ದೇಶದ ಹಲವೆಡೆ ರುದ್ರ ತಾಂಡವವಾಡುತ್ತಿದೆ. ಕೇರಳದಲ್ಲಿ ಈಗಾಗಲೇ ಮುಂಗಾರು ಮಳೆ ಪ್ರವೇಶಿಸಿದ್ದರೆ, ರಾಜ್ಯದಲ್ಲೂ ನಾಳೆಯಿಂದ ಮುಂಗಾರು ಮಳೆ ಆರಂಭವಾಗಲಿದೆ. ಇದೇ ವೇಳೆ ಅಸ್ಸಾಂನ ಲಖೀಂಪುರ ಜಿಲ್ಲೆಯಿಡೀ ಮಳೆಯ ಅಬ್ಬರದಿಂದ ಪ್ರವಾಹ ಪೀಡಿತವಾಗಿದ್ದು, ಕನಿಷ್ಟ 50 ಗ್ರಾಮಗಳೀಗ ಮುಳುಗಡೆಯ ಭೀತಿ ಎದುರಿಸುತ್ತಿವೆ. ಈಗಾಗಲೇ ಪ್ರವಾಹದಿಂದಾಗಿ 25 ಸಾವಿರ ಮಂದಿ ಸಂತ್ರಸ್ತರಾಗಿದ್ದಾರೆ.
ಅರುಣಾಚಲ ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಇದರಿಂದ ಬ್ರಹ್ಮಪುತ್ರಾ ನದಿ ಉಕ್ಕಿ ಹರಿಯುತ್ತಿದೆ. ಉಪನದಿಗಳಾದ ರಂಗಾನದಿ ಹಾಗೂ ಸಿಂಗೋರಾ ನದಿಗಳೂ ತುಂಬಿ ಹರಿಯುತ್ತಿವೆ. ಹೀಗಾಗಿ ಅಸ್ಸಾಂನ ನೌಭೋಯಿಭ ಹಾಗೂ ಲಖೀಂಪುರ ಜಿಲ್ಲೆಯ ಬಹುತೇಕ ಗ್ರಾಮಗಳೀಗ ಪ್ರವಾಹಕ್ಕೆ ತುತ್ತಾಗಿವೆ.
ದುರದೃಷ್ಟವೆಂದರೆ, ಈ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕಳೆದ ಏಪ್ರಿಲ್ ತಿಂಗಳಿಂದಲೇ ಇದು ಪ್ರವಾಹ ಭೀತಿ ಎದುರಿಸುತ್ತಿದ್ದು, ಇದೀಗ ಮೂರನೇ ಬಾರಿ ಪ್ರವಾಹ ಕಾಣಿಸಿಕೊಂಡಿದೆ. ಇದರ ಫಲವಾಗಿ 25 ಸಾವಿರ ಮಂದಿ ಸಂತ್ರಸ್ಥರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆದರೂ ಸರಕಾರದಿಂದ ಯಾವುದೇ ನೆರವಿನ ಹಸ್ತ ದೊರೆಯದ ಕಾರಣ ಜನ ಕೋಪೋದ್ರಿಕ್ತರಾಗಿದ್ದು, ಸರಕಾರಿ ಕಚೇರಿಗಳು ಹಾಗೂ ಅಧಿಕಾರಿಗಳಿಗೆ ಘೇರಾವ್ ಹಾಕಿದ್ದಾರೆ.
ಮಳೆಗೆ 24 ಬಲಿ: ಇದೇ ವೇಳೆ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲೂ ಗುಡುಗು ಸಹಿತ ಬಿರುಗಾಳಿ ಮಳೆ ಸಂಭವಿಸಿದ್ದು, ಕನಿಷ್ಟ 24 ಮಂದಿ ಬಲಿಯಾಗಿದ್ದಾರೆ. ವಿದ್ಯುತ್ ಕಂಬಗಳು, ಭಾರೀ ಗಾತ್ರದ ಮರಗಳು ಧರೆಗುರುಳಿದ್ದು, ಬಹುತೇಕ ನಾಗರಿಕ ಜೀವನ ಅಸ್ತವ್ಯಸ್ತವಾಗಿದ್ದು, ಟೆಲಿಫೋನ್ ಸಂಪರ್ಕವೂ ತಪ್ಪಿದೆ.