ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ಷರಧಾಮ ದಾಳಿ:ಮೂವರ ಗಲ್ಲುಶಿಕ್ಷೆ ಎತ್ತಿಹಿಡಿದ ಹೈಕೋರ್ಟ್ (Akshardham attack case | High Court | POTA court | death sentence)
ಅಕ್ಷರಧಾಮ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಪ್ರಮುಖ ಮೂರು ಆರೋಪಿಗಳಿಗೆ ಪೋಟಾ ಕೋರ್ಟ್ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ಎತ್ತಿಹಿಡಿಯುವ ಮೂಲಕ ಶಿಕ್ಷೆಯನ್ನು ಖಾಯಂಗೊಳಿಸಿದೆ.
2002ರಲ್ಲಿ ಗುಜರಾತ್‌ನ ಅಕ್ಷರಧಾಮದ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಪೋಟಾ ಕೋರ್ಟ್ 2006 ಜುಲೈನಲ್ಲಿ ಪ್ರಮುಖ ಆರೋಪಿಗಳಾದ ಅದಂ ಅಜ್‌ಮೆರಿ, ಶಾನ್ ಮಿಯಾ ಅಲಿಯಾಸ್ ಚಾಂದ್ ಖಾನ್ ಹಾಗೂ ಮುಫ್ತಿ ಅಬ್ದುಲ್ ಖ್ವಾಯ್ಯುಮ್ ಮನ್ಸೂರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅಲ್ಲದೇ ಒಬ್ಬನಿಗೆ ಜೀವಾವಧಿ, ಮತ್ತೋರ್ವನಿಗೆ ಹತ್ತು ವರ್ಷ, ಆರನೇ ಆರೋಪಿಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.
ಅಹಮದಾಬಾದ್‌ನ ಸ್ಥಳೀಯ ದಾರಿಪುರ್ ನಿವಾಸಿಗಳಾದ ಮೊಹಮ್ಮದ್ ಸಲೀಂ ಶೇಖ್‌ಗೆ ಜೀವಾವಧಿ, ಅಬ್ದುಲ್‌ಮಿಯಾನ್ ಖಾದ್ರಿಗೆ ಹತ್ತು ವರ್ಷ ಹಾಗೂ ಅಲ್ತಾಫ್ ಹುಸೈನ್‌ಗೆ ಐದು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು.
2002ರ ಸೆಪ್ಟೆಂಬರ್ 25ರಂದು ಅಕ್ಷರಧಾಮದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ 33 ಮಂದಿ ಬಲಿಯಾಗಿದ್ದರು. ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರಾದ ಮುರ್ತುಜಾ ಹಫೀಜ್ ಮತ್ತು ಅಶ್ರಫ್ ಅಲಿ ಮೊಹಮ್ಮದ್ ಫಾರೂಕ್ ಈ ದಾಳಿ ನಡೆಸಿದ್ದರು. ಆದರೆ ಭದ್ರತಾ ಸಿಬ್ಬಂದಿಗಳು ಪ್ರತಿದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು.
ಪ್ರಕರಣದಲ್ಲಿ ಆರೋಪಿತರಾದ ಆರು ಮಂದಿಗೆ ಶಿಕ್ಷೆ ವಿಧಿಸಿದ್ದ ಪೋಟಾ ಕೋರ್ಟ್, ಆರೋಪಿಗಳಿಗೆ ನೀಡಿದ್ದ ಶಿಕ್ಷೆಯನ್ನು ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅಲ್ಲದೇ ಪೋಟಾ ಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. ಆ ನಿಟ್ಟಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಆರ್.ಎಂ.ದೋಸ್‌ಹಿತ್ ಮತ್ತು ಕೆ.ಎಂ.ಠಾಕೂರ್ ಅವರು, ಮೂವರ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದು, ಇನ್ನುಳಿದಂತೆ ಪೋಟಾ ಕೋರ್ಟ್ ನೀಡಿದ ಆದೇಶವನ್ನು ಪರಿಗಣಿಸಿರುವುದಾಗಿ ತೀರ್ಪು ನೀಡಿದರು.