ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾತ್ರೆಗೆ ಗ್ರೀನ್ ಸಿಗ್ನಲ್-ಜಗನ್,ಪಕ್ಷ ಅನುಮತಿ ಕೊಟ್ಟಿಲ್ಲ: ಮೊಯ್ಲಿ (Congress | Jaganmohan Reddy | Telangana | Veerappa Moily,)
Bookmark and Share Feedback Print
 
ನವದೆಹಲಿ: ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನಡೆಸಲು ಉದ್ದೇಶಿಸಿರುವ ವಿವಾದಿದ ಸಾಂತ್ವನ ಯಾತ್ರೆ ಮುಂದುವರಿಸುವಂತೆ ಪಕ್ಷ ಯಾವುದೇ ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ.

ಸಾಂತ್ವನ ಯಾತ್ರೆ ಕುರಿತಂತೆ ಮಂಗಳವಾರ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿಯನ್ನು ಭೇಟಿಯಾಗಿ ಜಗನ್ ಮಾತುಕತೆ ನಡೆಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಂತ್ವನ ಯಾತ್ರೆ ಮುಂದುವರಿಸುವಂತೆ ಮೊಯ್ಲಿ ಸೂಚಿಸಿದ್ದು, ತನ್ನ ಕಾರ್ಯಕ್ಕೆ ಅವರು ಶ್ಲಾಘನೆ ವ್ಯಕ್ತಪಡಿಸಿರುವುದಾಗಿ ಹೇಳಿದ್ದರು. ಇದೀಗ ಜಗನ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟ ಬೆನ್ನಲ್ಲೇ, ಮೊಯ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವಾರ ಹೈಕಮಾಂಡ್‌ನ ವಿರೋಧವನ್ನು ಲೆಕ್ಕಿಸದೇ ತೆಲಂಗಾಣ ಭಾಗದಲ್ಲಿ ಸಾಂತ್ವನ ಯಾತ್ರೆ ಹಮ್ಮಿಕೊಂಡು ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟ ಘಟನೆ ಕುರಿತಂತೆ ವಿವರಣೆ ನೀಡುವಂತೆ ಕಾಂಗ್ರೆಸ್ ರೆಡ್ಡಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಆ ನಿಟ್ಟಿನಲ್ಲಿ ಆಂಧ್ರಪ್ರದೇಶದ ಎಐಸಿಸಿಯ ಇನ್‌ಚಾರ್ಜ್ ಆಗಿದ್ದ ಮೊಯ್ಲಿ ಜೊತೆ ಜಗನ್ ಸುಮಾರು 20ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.

ಯಾತ್ರೆಗೆ ಗ್ರೀನ್ ಸಿಗ್ನಲ್-ಜಗನ್ : ಸಾಂತ್ವನ ಯಾತ್ರೆ ಹಮ್ಮಿಕೊಂಡು ಕಾಂಗ್ರೆಸ್ ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿದ್ದ ಆಂಧ್ರಪ್ರದೇಶದ ಸಂಸದ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಇದೀಗ ಪಕ್ಷ ಹಾಗೂ ತನ್ನ ನಡುವಿನ ಎಲ್ಲಾ ಬಿಕ್ಕಟ್ಟು ಬಗೆಹರಿದಿದ್ದು ಯಾತ್ರೆಯನ್ನು ಮುಂದುವರಿಸುವಂತೆ ಪಕ್ಷ ಸೂಚನೆ ನೀಡಿದೆ ಎಂದು ತಿಳಿಸಿದ್ದರು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಆ ಹಿನ್ನೆಲೆಯಲ್ಲಿ ಪುತ್ರ, ಸಂಸದ ಜಗನ್ ಮೋಹನ್ ರೆಡ್ಡಿ ತೆಲಂಗಾಣ ಪ್ರದೇಶದಲ್ಲಿ ಸಾಂತ್ವನಾ ಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಯಾತ್ರೆಗೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ತೆಲಂಗಾಣ ಪರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತೀವ್ರ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಸಾಕಷ್ಟು ಗಲಾಟೆ, ಗೊಂದಲ ನಡೆದ ನಂತರ ಜಗನ್ ಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿದ್ದರು.

ಇದೀಗ ಬಿಕ್ಕಟ್ಟಿನ ಕುರಿತಂತೆ ಮಂಗಳವಾರ ಆಂಧ್ರಪ್ರದೇಶದ ಎಐಸಿಸಿ ಇನ್‌ಚಾರ್ಜ್ ಆಗಿರುವ ಹಾಗೂ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಬಿಕ್ಕಟ್ಟು ಬಗೆಹರಿದಿದೆ. ಅಲ್ಲದೇ ತಾನು ಯಾತ್ರೆಯನ್ನು ಮುಂದುವರಿಸುವುದಾಗಿಯೂ ಹೇಳಿದ್ದರು.

ತನ್ನ ಸಾಂತ್ವನ (ಒದರ್ಪು ಯಾತ್ರೆ) ಯಾತ್ರೆ ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿಲ್ಲ, ತನ್ನ ತಂದೆ ದಿ.ವೈಎಸ್ಆರ್ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡು ಆತ್ಮಹತ್ಯೆಗೆ ಶರಣಾದ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವುದಷ್ಟೇ ತನ್ನ ಉದ್ದೇಶ ಎಂದು ಮೊಯ್ಲಿ ಅವರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಜಗನ್ ವಿವರಣೆ ನೀಡಿದ್ದರು.

ಹಾಗಾಗಿ ಯಾತ್ರೆಯ ಉದ್ದೇಶ ತಿಳಿದ ಮೊಯ್ಲಿ, ಯಾತ್ರೆಯನ್ನು ಮುಂದುವರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದರು. ತನ್ನ ಕಾರ್ಯಕ್ಕೆ ಸಚಿವ ಮೊಯ್ಲಿ ಶ್ಲಾಘನೆ ವ್ಯಕ್ತಪಡಿಸಿರುವುದಾಗಿಯೂ ಹೇಳಿದರು. ತಾನು ಸಚಿವ ಮೊಯ್ಲಿ ಅವರ ಕೊಠಡಿ ಪ್ರವೇಶಿಸಿದಾಗ ತನ್ನನ್ನು ನಗು ಮೊಗದಿಂದ ಸ್ವಾಗತಿಸಿದರು. ಅದೇ ರೀತಿ ಯಾತ್ರೆಯನ್ನು ಮುಂದುವರಿಸುವಂತೆ ಸೂಚಿಸಿ ತನ್ನನ್ನು ಆಶೀರ್ವದಿಸಿದರು ಎಂದು ಮೊಯ್ಲಿ ಜೊತೆಗಿನ 20ನಿಮಿಷಗಳ ಮಾತುಕತೆ ತರುವಾಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ