10ನೇ ತರಗತಿ ಪಾಸು ಮಾಡಬೇಕೆಂದು ಅದೆಷ್ಟೋ ವರ್ಷಗಳಿಂದ ಹೆಣಗಾಡುತ್ತಿರುವ 66 ವರ್ಷದ ಈ ವೃದ್ಧರ 'ಮರಳಿ ಯತ್ನವ ಮಾಡು' ಎಂಬ ಮಾತಿನ ಮೇಲಿನ ನಂಬಿಕೆ ನಿಜಕ್ಕೂ ಈಗಿನ ವಿದ್ಯಾರ್ಥಿಗಳಿಗೆ ಮಾದರಿ! ಹೌದು, 66 ವರ್ಷ ಪ್ರಾಯದ ಈ ಜಬ್ಬಾರ್ ಹುಸೇನ್, ಈ ವರ್ಷವೂ 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಆದರೆ ಅವರು ಈ ಬಾರಿಯೂ ಫೇಲ್. ಈ 'ವೈಫಲ್ಯ' ಎಷ್ಟನೇ ಬಾರಿಯದು ಗೊತ್ತೇ? 45ನೆಯದು!
ಫತೇಪುರ ಜಿಲ್ಲೆಯ ಬಿಂಡ್ಕಿ ಎಂಬಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ಹುಸೇನ್‌ಗೆ 10ನೇ ತರಗತಿಯ ಆರರಲ್ಲಿ ಮೂರು ವಿಷಯಗಳಲ್ಲಿ ಪಾಸ್ ಆಗುವುದು ಸಾಧ್ಯವೇ ಆಗಿಲ್ಲ. ಮಂಗಳವಾರ ಈ ವರ್ಷದ ಫಲಿತಾಂಶ ಘೋಷಣೆಯಾಗಿತ್ತು.
ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷದ್‌ನಲ್ಲಿ ನೋಂದಾಯಿಸಿರುವ ಅತ್ಯಂತ ಹಿರಿಯ ವಿದ್ಯಾರ್ಥಿಯಾಗಿರುವ ಹುಸೇನ್‌ಗೆ, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆಯಾಗಿವೆ.
ಹೊಸ ಗ್ರೇಡಿಂಗ್ ಪದ್ಧತಿಯ ಪ್ರಕಾರ, ಎರಡಕ್ಕಿಂತ ಹೆಚ್ಚು ವಿಷಯಗಳಲ್ಲಿ ನಪಾಸಾಗುವ ಯಾವುದೇ ಅಭ್ಯರ್ಥಿಗೆ ಮರು ಪರೀಕ್ಷೆ ಅವಕಾಶ ಇರುವುದಿಲ್ಲ. ಹೀಗಾಗಿ ಅವರು ಮುಂದಿನ ವರ್ಷದ ಪರೀಕ್ಷೆಗೆ ಕಾಯಬೇಕು. ಆದರೆ, ಯಾವುದೇ ಅಕ್ರಮ ಎಸಗದೆ, ಗುರಿ ಸಾಧಿಸುವ ಅವರ ಛಲ ನೋಡಿ ನಮಗೆ ಆಶ್ಚರ್ಯವಾಗಿದೆ ಎಂದಿದ್ದಾರೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.
'ಪ್ರತೀ ವರ್ಷ ನಾನು ಮಾಡಿದ ತಪ್ಪಿನಿಂದ ಹೊಸದೊಂದನ್ನು ಕಲಿಯುತ್ತಿದ್ದೇನೆ ಮತ್ತು ಮುಂದಿನ ಪರೀಕ್ಷೆಯಲ್ಲಿ ಇದೇ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇನೆ. ಆದರೆ ಒಂದಲ್ಲ ಒಂದು ದಿನ ನನ್ನ ಕನಸು ನನಸಾಗುತ್ತದೆ ಎಂಬುದು ನನ್ನ ಆಶಾವಾದ ' ಎನ್ನುತ್ತಾರೆ ಹುಸೇನ್. ಅವರಿಗೊಂದು ಬೆಸ್ಟ್ ಆಫ್ ಲಕ್!