ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ:ಆಘಾತಗೊಂಡ ತಾಯಿ ಸಾವು! (Chandigarh | Manali | Rattanpreet Singh | Student beaten | mother dies)
Bookmark and Share Feedback Print
 
ಶಾಲೆ ವತಿಯಿಂದ ಆಯೋಜಿಸಿದ್ದ ಮನಾಲಿ ಪ್ರವಾಸಕ್ಕಾಗಿ ತನ್ನಿಂದ ವಸೂಲಿ ಮಾಡಿಕೊಂಡಿದ್ದ ಹೆಚ್ಚಿನ ಹಣವನ್ನು ವಾಪಸು ನೀಡುವಂತೆ ಕೇಳಿದ್ದಕ್ಕೆ ಶಿಕ್ಷಕ ಮಹಾಶಯರಿಬ್ಬರು ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಅಷ್ಟೇ ಅಲ್ಲ ಮಗನಿಗೆ ಹೊಡೆದ ವಿಷಯ ಕೇಳಿ ಶಾಕ್‌ನಿಂದ ತಾಯಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಚಂಡೀಗಢದಲ್ಲಿ ನಡೆದಿದೆ.

8ನೇ ತರಗತಿಯ ರತನ್‌ಪ್ರೀತ್ ಸಿಂಗ್ ಯಾದವಿಂದರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ. ಶಾಲೆಯ ವತಿಯಿಂದ ಮೇ 23ರಂದು ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ಆಯೋಜಿಸಿದ್ದರು. ಒಂದು ವಾರ ಕಾಲದ ಈ ಪ್ರವಾಸದಲ್ಲಿ ಸಿಂಗ್ ಸೇರಿದಂತೆ 56ವಿದ್ಯಾರ್ಥಿಗಳಿದ್ದರು. ಆದರೆ ಶಿಕ್ಷಕ ಹರೀಶ್ ಕುಮಾರ್ ರತನ್‌ಪ್ರೀತ್‌ನಿಂದ 500 ರೂಪಾಯಿ ವಸೂಲಿ ಮಾಡಿದ್ದರು. ಉಳಿದ ವಿದ್ಯಾರ್ಥಿಗಳಿಂದ 200 ರೂ.ಸಂಗ್ರಹಿಸಿದ್ದರು.
ಮನಾಲಿ ಪ್ರವಾಸ ಮುಗಿಸಿ ಬಂದ ನಂತರ ರತನ್‌ಪ್ರೀತ್ ಶುಕ್ರವಾರ, ತನ್ನಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಹಣವನ್ನು ವಾಪಸ್ ಕೊಡುವಂತೆ ಶಿಕ್ಷಕರಲ್ಲಿ ಒತ್ತಾಯಿಸಿದ್ದ. ರತನ್ ಹಣ ವಾಪಸ್ ಕೇಳಿದ್ದ ತಡ ಹರೀಶ್ ಕುಮಾರ್ ಹಿಗ್ಗಾಮುಗ್ಗಾ ಥಳಿಸಿದ್ದರು, ಅದೂ ಇಬ್ಬರು ಶಿಕ್ಷರು ಸೇರಿಕೊಂಡು ಹೊಡೆದಿದ್ದರು.

ಶಾಕ್‌ನಿಂದ ತಾಯಿ ಸಾವು: ಮಗನಿಗೆ ಹೊಡೆದ ವಿಷಯ ಕೇಳಿದ ತಕ್ಷಣ ವಿದ್ಯಾರ್ಥಿಯ ಪೋಷಕರು ಶಾಲೆಗೆ ಭೇಟಿ ನೀಡಿ ಘಟನೆ ಬಗ್ಗೆ ವಿಚಾರಿಸಿದ್ದರು. ಏತನ್ಮಧ್ಯೆ ವಿದ್ಯಾರ್ಥಿಯ ತಾಯಿ ಗುರ್‌ಪ್ರೀತ್ ಕೌರ್ ಶಾಕ್‌ನಿಂದ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ತನ್ನ ಮಗನ ಮೇಲೆ ತಾಯಿ ವಿಶೇಷ ಪ್ರೀತಿಯನ್ನು ಹೊಂದಿದ್ದರು. ಯಾವ ತಪ್ಪು ಮಾಡದ ಮಗನಿಗೆ ಹೊಡೆದ ವಿಷಯ ಕೇಳಿ ತಾಯಿ ಸಾವನ್ನಪ್ಪಿರುವುದಾಗಿ ರತನ್‌ಪ್ರೀತ್ ತಂದೆ ತಿಳಿಸಿದ್ದು, ತನ್ನ ಪತ್ನಿಯ ಸಾವಿಗೆ ಶಾಲೆಯ ಅಡಳಿತ ಮಂಡಳಿಯೇ ಹೊಣೆ, ಆ ನಿಟ್ಟಿನಲ್ಲಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಶಿಕ್ಷಕನ ಅಮಾನತು: ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟ ಘಟನೆಯಿಂದ ಮುಜುಗರಕ್ಕೆ ಒಳಗಾದ ಶಾಲಾ ಆಡಳಿತ ಮಂಡಳಿ ಇದೀಗ ಶಿಕ್ಷಕ ಹರೀಶ್ ಕುಮಾರ್‌ನನ್ನು ಅಮಾನತು ಮಾಡಿದೆ. ಅಲ್ಲದೇ ಮತ್ತೊಬ್ಬ ಶಿಕ್ಷಕ ಅನಿಲ್ ಪಾಥಾನಿಯಾ ವಿರುದ್ಧ ತನಿಖೆ ನಡೆಸುವಂತೆ ಆಡಳಿತ ಮಂಡಳಿ ಸೂಚಿಸಿದೆ. ಒಂದು ವೇಳೆ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ಇಬ್ಬರನ್ನೂ ಕೆಲಸದಿಂದ ವಜಾ ಮಾಡುವುದಾಗಿ ಶಾಲೆಯ ಉಪ ಪ್ರಾಂಶುಪಾಲರಾದ ಅನಿತಾ ಕಶ್ಯಪ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ