ಕಳೆದ ವಾರ ಮಿಡ್ನಾಪುರದ ಜಾರ್‌ಗ್ರಾಮ್‌ನಲ್ಲಿ ಸಂಭವಿಸಿದ ರೈಲ್ವೆ ಹಳಿ ಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಪಶ್ಚಿಮಬಂಗಾಳ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ.
ಪಶ್ಚಿಮಬಂಗಾಳದ ಜಾರ್‌ಗ್ರಾಮ್‌ನಲ್ಲಿ ರೈಲ್ವೆ ಹಳಿ ಸ್ಫೋಟ ಸಂಭವಿಸಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಗೂಡ್ಸ್ ರೈಲೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 148 ಪ್ರಯಾಣಿಕರು ಸಾವನ್ನಪ್ಪಿದ್ದರು. 150ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಘಟನೆ ನಂತರ, ಇದೊಂದು ರಾಜಕೀಯ ಪ್ರೇರಿತ ಸಂಚು ಎಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಆದರೆ ಆಡಳಿತಾರೂಢ ಎಡಪಕ್ಷ, ಪೊಲೀಸ್ ಹಾಗೂ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಈ ದಾಳಿಯ ಹಿಂದೆ ನಕ್ಸಲ್ ಕೈವಾಡ ಇರುವುದಾಗಿ ಹೇಳಿದ್ದರು.
ರೈಲು ದುರಂತ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬ್ಯಾನರ್ಜಿ ಈ ಮೊದಲು ಆಗ್ರಹಿಸಿದ್ದಾಗ ಬಂಗಾಳ ಸರ್ಕಾರ ಅದನ್ನು ತಿರಸ್ಕರಿಸಿತ್ತು. ರಾಜ್ಯದ ಸಿಐಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿತ್ತು.
ಆದರೆ ಇದೀಗ ತನ್ನ ನಿಲುವಿನಿಂದ ಹಿಂದೆ ಸರಿದ ಪಶ್ಚಿಮಬಂಗಾಳ ಸರ್ಕಾರ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆ ನಿಟ್ಟಿನಲ್ಲಿ ಸಿಬಿಐ ಜೊತೆ ರಾಜ್ಯ ಪೊಲೀಸ್ ತಂಡ, ರೈಲ್ವೆ ಇಲಾಖೆ ಪೊಲೀಸರು ಸಾಥ್ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.