ಪುಣೆಯ ಜರ್ಮನ್ ಸ್ಫೋಟ ಪ್ರಕರಣದ ಶಂಕಿತ ಆರೋಪಿ, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿತನಾಗಿದ್ದ ಅಬ್ದುಲ್ ಸಮದ್ ಭಟ್ಕಳ್ ಇದೀಗ ಜಾಮೀನು ಪಡೆಯಲು ಸೆಷನ್ಸ್ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾನೆ.
ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಬಂಧಿತನಾಗಿದ್ದ ಸಮದ್‌ಗೆ ಮಂಗಳವಾರ ಮೆಟ್ರೋಪಾಲಿಟನ್ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಸಮದ್‌ಗೆ ಜಾಮೀನು ನೀಡಬೇಕೆಂದು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿರುವುದಾಗಿ ಆತನ ಪರ ವಕೀಲರು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಖಚಿತ ಮಾಹಿತಿ ಮೇರೆಗೆ ಮೇ 25ರಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಬಂಧಿಸಿ, ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದರು.
ಆತನ ಬಂಧನವಾಗುತ್ತಿದ್ದಂತೆಯೇ ಸಮದ್ ಭಟ್ಕಳ್ ಫೆಬ್ರುವರಿ 2010ರಲ್ಲಿ ನಡೆದ ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿಯಾಗಿದ್ದ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿಕೆ ಕೊಟ್ಟಿದ್ದರು. ಈ ಸ್ಫೋಟದಲ್ಲಿ 17ಮಂದಿ ಬಲಿಯಾಗಿದ್ದು, ಹಲವಾರು ಜನರು ಗಾಯಗೊಂಡಿದ್ದರು. ಏತನ್ಮಧ್ಯೆ ಪುಣೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ಈವರೆಗೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.