ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿಗೆ ಹುಟ್ಟುಹಬ್ಬ: ಉಚಿತ ಆಸ್ಪತ್ರೆಗಾಗಿ ಮನೆಯೇ ದಾನ! (Karunanidhi | Tamilnadu CM | Politics | Old Madras style)
ಕರುಣಾನಿಧಿಗೆ ಹುಟ್ಟುಹಬ್ಬ: ಉಚಿತ ಆಸ್ಪತ್ರೆಗಾಗಿ ಮನೆಯೇ ದಾನ!
ಚೆನ್ನೈ, ಗುರುವಾರ, 3 ಜೂನ್ 2010( 09:47 IST )
PTI
87ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ತಮ್ಮ ಅತ್ಯಂತ ಇಷ್ಟದ, ತಾನು ಬಾಳಿ ಬದುಕಿದ್ದ ಮನೆಯನ್ನು ಬಡವರಿಗೆ ಉಚಿತವಾಗಿ ಸೇವೆ ನೀಡಲಿರುವ ಆಸ್ಪತ್ರೆಗೆ ದಾನವಾಗಿ ನೀಡುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಲಿದ್ದಾರೆ. ಆ ಮೂಲಕ ಇತರ ರಾಜಕಾರಣಿಗಳಿಗೂ ಮಾದರಿಯಾಗಲಿದ್ದಾರೆ.
ಹೌದು. ಕರುಣಾನಿಧಿ ಮತ್ತು ಅವರ ಮೊದಲ ಪತ್ನಿ ದಯಾಲು ಅಮ್ಮಾಳ್ ಅವರ ಅಧಿಕೃತ ನಿವಾಸವಾಗಿದ್ದ ಚೆನ್ನೈಯ ಹೃದಯಭಾಗವಾದ ಗೋಪಾಲಪುರದಲ್ಲಿರುವ ಈ ಮನೆಯೀಗ ಆಸ್ಪತ್ರೆಗೆ ಹಸ್ತಾಂತರಗೊಳ್ಳಲು ಸಿದ್ಧತೆ ನಡೆಸುತ್ತಿದೆ. 1924ರ ಜೂನ್ 3ರಂದು ಜನಿಸಿದ ಕರುಣಾನಿಧಿ ಅವರು 1955ರಲ್ಲಿ ಚಿತ್ರ ಸಾಹಿತಿಯಾಗಿದ್ದ ಸಂದರ್ಭ ಸರಬೇಶ್ವರ ಆಯ್ಯರ್ ಎಂಬವರಿಂದ ಈ ಮನೆ ಖರೀದಿಸಿದ್ದರು. ಇದು ಪಕ್ಕಾ ಹಳೇ ಮದರಾಸು ವಾಸ್ತುಶಿಲ್ಪ ಶೈಲಿಯ ಆಕರ್ಷಕ ಮನೆಯಾಗಿದೆ.
ಕರುಣಾನಿಧಿ ಅವರ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರ ಉಪಸ್ಥಿತಿಯ ನಡುವೆ ಬುಧವಾರ ಕರುಣಾನಿಧಿ ತಮ್ಮ ಈ ಗೋಪಾಲಪುರದ ಮನೆಯನ್ನು ತಮ್ಮ ತಾಯಿ ದಿವಂಗತ ಅಂಜುಗಮ್ ಅಮ್ಮಳ್ ಅವರ ಹೆಸರಿನಲ್ಲಿ ರಚಿಸಿರುವ ಪ್ರತಿಷ್ಠಾನಕ್ಕೆ ದಾನವಾಗಿ ನೀಡುವ ದಾಖಲೆ ಪತ್ರಗಳಿಗೆ ಸಹಿ ಹಾಕಿದರು.
ಇನ್ನು ಮುಂದೆ ಈ ಆಸ್ಪತ್ರೆಯಾಗಿ ಬದಲಾಗುವ ಮನೆ 'ಕಲೈಂಜ್ಞರ್ ಕರುಣಾನಿಧಿ ಮಾರುತುವ ಮನೆ' ಎಂಬ ಹೆಸರಿನಲ್ಲಿ ಬಡ ಬಗ್ಗರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲಿದೆ.