ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಪಿಎಲ್‌ನಲ್ಲಿ ಶೇರು; ಇಲ್ಲವೇ ಇಲ್ಲ ಎಂದ ಸಚಿವ ಪವಾರ್! (IPL | Sharad Pawar | City Corporation | Supriya Sule)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸಚಿವರಾದ ಶಶಿ ತರೂರ್ ಮತ್ತು ಪ್ರಫುಲ್ ಪಟೇಲ್ ಹೆಸರುಗಳು ಇಂಡಿಯನ್ ಪ್ರೀಮಿಯರ್ ಲೀಗ್ ಅವ್ಯವಹಾರದಲ್ಲಿ ಕೇಳಿ ಬಂದಾಗ ನುಣುಚಿಕೊಂಡಿದ್ದ ಮತ್ತೊಬ್ಬ ಸಚಿವ ಶರದ್ ಪವಾರ್, ಐಪಿಎಲ್ ತಂಡವೊಂದರಲ್ಲಿ ಹೂಡಿಕೆ ಮಾಡಿದ್ದ ಅಂಶ ಬಯಲಿಗೆ ಬಂದಿದೆ.

ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಅವರ ಪತ್ನಿ ಪ್ರತಿಭಾ ಪವಾರ್ ಮತ್ತು ಪುತ್ರಿ ಸುಪ್ರಿಯಾ ಸುಳೆಯವರು 33.6 ಲಕ್ಷ ಶೇರುಗಳನ್ನು (ಸುಮಾರು ಎರಡು ಕೋಟಿ ರೂಪಾಯಿ ಮೊತ್ತ) ಹೊಂದಿದ್ದರು ಎಂದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ವರದಿ ಮಾಡಿದೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಐಪಿಎಲ್ ತಂಡಗಳಿಗಾಗಿ ನಡೆದಿದ್ದ ಹರಾಜು ಸಂದರ್ಭದಲ್ಲಿ ಪುಣೆ ಫ್ರಾಂಚೈಸಿಗಾಗಿ 'ಸಿಟಿ ಕಾರ್ಪೊರೇಷನ್' ಎಂಬ ಕಟ್ಟಡ ನಿರ್ಮಾಣ ಕಂಪನಿ 1,176 ಕೋಟಿ ರೂಪಾಯಿಗಳ ಬಿಡ್ ಮಾಡಿತ್ತು. ಇದರಲ್ಲಿ ಪವಾರ್ ಕುಟುಂಬ 33.6 ಲಕ್ಷ ಶೇರುಗಳನ್ನು ಹೊಂದಿತ್ತು ಎಂಬುವುದರ ಬಗ್ಗೆ ತನ್ನಲ್ಲಿ ದಾಖಲೆಗಳಿವೆ ಎಂದು ಪತ್ರಿಕೆ ಹೇಳಿಕೊಂಡಿದೆ.

ಐಪಿಎಲ್ ಕ್ರಿಕೆಟ್ ತಂಡಕ್ಕಾಗಿ ಬಿಡ್ ಮಾಡಿದ್ದ 'ಸಿಟಿ ಕಾರ್ಪೊರೇಷನ್'ನಲ್ಲಿ ಶೇ.16ರ ಶೇರನ್ನು ಪವಾರ್ ಕುಟುಂಬವು ತನ್ನ ಮಾಲಕತ್ವದ ಎರಡು ಕಂಪನಿಗಳಾದ 'ಲ್ಯಾಪ್ ಫೈನಾನ್ಸ್ ಎಂಡ್ ಕನ್ಸಲ್ಟೆನ್ಸಿ ಪ್ರೈವೆಟ್ ಲಿಮಿಟೆಡ್' (25.6 ಲಕ್ಷ) ಮತ್ತು 'ನಮ್ರತಾ ಫಿಲ್ಮ್ ಎಂಟರ್‌‌ಪ್ರೈಸಸ್ ಪ್ರೈವೆಟ್ ಲಿಮಿಟೆಡ್' (8 ಲಕ್ಷ) ಮೂಲಕ ಹೊಂದಿತ್ತು.

'ಲ್ಯಾಪ್ ಫೈನಾನ್ಸ್ ಎಂಡ್ ಕನ್ಸಲ್ಟೆನ್ಸಿ ಪ್ರೈವೆಟ್ ಲಿಮಿಟೆಡ್' ಮತ್ತು 'ನಮ್ರತಾ ಫಿಲ್ಮ್ ಎಂಟರ್‌‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್' ಎಂಬ ಎರಡೂ ಕಂಪನಿಗಳ ಸಂಪೂರ್ಣ ಅಂದರೆ ಶೇ.100ರ ಮಾಲಕತ್ವ ಶರದ್ ಪವಾರ್, ಅವರ ಪತ್ನಿ ಮತ್ತು ಸಂಸದೆ ಪುತ್ರಿಯಲ್ಲಿದೆ.

ಮಾರ್ಚ್ 21ರಂದು ಮುಕ್ತಾಯಗೊಂಡಿದ್ದ ಐಪಿಎಲ್ ಎರಡನೇ ಸುತ್ತಿನ ಹರಾಜಿನಲ್ಲಿ ಪುಣೆ ಮತ್ತು ಕೊಚ್ಚಿ ತಂಡಗಳನ್ನು ಪ್ರಕಟಿಸಲಾಗಿತ್ತು. ಸಿಟಿ ಕಾರ್ಪೊರೇಷನ್‌ಗಿಂತ ಹೆಚ್ಚು ಬಿಡ್ ಮಾಡಿದ್ದ 'ಸಹರಾ' ಪುಣೆ ಫ್ರಾಂಚೈಸಿಯನ್ನು ಗೆದ್ದುಕೊಂಡಿತ್ತು.

ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿಲ್ಲ: ಪವಾರ್
ಈ ನಡುವೆ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವ ಪವಾರ್, ನನ್ನ ಕುಟುಂಬದ ವ್ಯಕ್ತಿಗಳು ಐಪಿಎಲ್ ಬಿಡ್ಡಿಂಗ್‌ನಲ್ಲಿ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪಾಲ್ಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಸಿಟಿ ಕಾರ್ಪೊರೇಷನ್' ಆಡಳಿತ ಮಂಡಳಿಯು ಐಪಿಎಲ್‌ಗೆ ಬಿಡ್ಡಿಂಗ್ ಮಾಡದೇ ಇರಲು ನಿರ್ಧರಿಸಿತ್ತು. ಆದರೆ ಅದರ ಆಡಳಿತ ನಿರ್ದೇಶಕ ಅನಿರುದ್ಧ ದೇಶಪಾಂಡೆ ವೈಯಕ್ತಿಕವಾಗಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ಪವಾರ್ ವಿವರಣೆ ನೀಡಿದ್ದಾರೆ.

ಅದೇ ಹೊತ್ತಿಗೆ ಅತ್ತ ದೇಶಪಾಂಡೆ ಕೂಡ ಇದೇ ಹೇಳಿಕೆಯನ್ನು ನೀಡಿದ್ದಾರೆ. ನಾನು ಬಿಡ್ಡಿಂಗ್ ಮಾಡಿದ್ದು ನನ್ನ ವೈಯಕ್ತಿಕ ಸಾಮರ್ಥ್ಯದಿಂದಲೇ ಹೊರತು 'ಸಿಟಿ ಕಾರ್ಪೊರೇಷನ್' ಪರವಾಗಿ ಅಲ್ಲ ಎಂದಿದ್ದಾರೆ.

ಇದನ್ನು ಬೆಂಬಲಿಸುವ ಹೇಳಿಕೆಯನ್ನು ಸುಪ್ರಿಯಾ ಸುಳೆ ಕೂಡ ನೀಡಿದ್ದಾರೆ. ದೇಶಪಾಂಡೆಯವರು ತನ್ನ ಸ್ವಂತ ಸಾಮರ್ಥ್ಯದಿಂದ ಬಿಡ್ಡಿಂಗ್ ಮಾಡಿದ್ದಾರೆಯೇ ಹೊರತು, ಕಂಪನಿಯ ಪರವಾಗಿ ಅಲ್ಲ. ಸಿಟಿ ಕಾರ್ಪೊರೇಷನ್ ಕಂಪನಿಗೂ ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಆದರೆ ದೇಶಪಾಂಡೆಯವರು ಪುಣೆ ಫ್ರಾಂಚೈಸಿಗಾಗಿ 'ಸಿಟಿ ಕಾರ್ಪೊರೇಷನ್' ಹೆಸರಿನಲ್ಲೇ ಬಿಡ್ಡಿಂಗ್ ಮಾಡಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ