ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಲ್ಲು ವಿರುದ್ಧ ವಾದಕ್ಕೆ ಉಚಿತ ಲಾಯರ್ ಬೇಕು: ಕಸಬ್ (Ajmal Kasab | death sentence | Mumbai attack | Pakistan)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಸಂಬಂಧ ವಿಶೇಷ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆ ಪಡೆದುಕೊಂಡಿರುವ ಪಾಕಿಸ್ತಾನದ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಇದೀಗ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದು, ತನಗಾಗಿ ನ್ಯಾಯವಾದಿಯೊಬ್ಬರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದಾನೆ.

2008ರ ನವೆಂಬರ್ 26ರಂದು ಭಾರತದ ವಾಣಿಜ್ಯ ರಾಜಧಾನಿ ಮುಂಬೈಯ ಹಲವೆಡೆ ದಾಳಿ ನಡೆಸಿದ್ದ ಪಾಕಿಸ್ತಾನದ 10 ಭಯೋತ್ಪಾದಕರ ಪೈಕಿ ಜೀವಂತವಾಗಿ ಸೆರೆ ಸಿಕ್ಕಿದ್ದ ಏಕೈಕ ಉಗ್ರ ಕಸಬ್‌ಗೆ ವಿಶೇಷ ನ್ಯಾಯಾಲಯವು ಕಳೆದ ತಿಂಗಳು ಗಲ್ಲು ಶಿಕ್ಷೆ ಪ್ರಕಟಿಸಿತ್ತು.
PTI

ಇದೀಗ ಶಿಕ್ಷೆಯ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಸಬ್ ನಿರ್ಧರಿಸಿದ್ದಾನೆ. ಅಲ್ಲೂ ಆತನಿಗೆ 'ನ್ಯಾಯ' ಸಿಗದೇ ಇದ್ದರೆ, ಸುಪ್ರೀಂ ಕೋರ್ಟ್, ನಂತರ ರಾಷ್ಟ್ರಪತಿಯವರಲ್ಲಿ ಕ್ಷಮಾದಾನಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.

ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಬಂಧ ಕಸಬ್ ತನ್ನ ಅರ್ಜಿಯನ್ನು ಜೈಲು ಸೂಪರಿಂಟೆಂಡೆಂಟ್‌ಗೆ ನೀಡಿದ್ದು, ಅವರು ಕಾನೂನು ಸಲಹಾ ಸಮಿತಿಗೆ ಹಸ್ತಾಂತರಿಸಿದ್ದಾರೆ. ಈ ಸಮಿತಿಯು ವಕೀಲರೊಬ್ಬರನ್ನು ನೇಮಿಸಲಿದೆ. ಕಸಬ್ ಅರ್ಜಿಯನ್ನು ಪರಿಶೀಲನೆ ನಡೆಸಿದ ನಂತರ ಅದು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಈ ಪ್ರಕ್ರಿಯೆಗಳಿಗೆ ಕನಿಷ್ಠ ಎರಡು ವಾರಗಳ ಕಾಲಾವಧಿ ಅಗತ್ಯವಿದೆ.

ವಿಶೇಷ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ತನಗೆ ಉಚಿತವಾಗಿ ವಕೀಲರೊಬ್ಬರನ್ನು ನೇಮಕ ಮಾಡಬೇಕು ಎಂದು ಕಸಬ್ ಕಾನೂನು ಸಲಹಾ ಸಮಿತಿಗೆ ಪತ್ರ ಬರೆದಿದ್ದಾನೆ. ಇದು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೊದಲ ಹಂತ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ವಿಶೇಷ ನ್ಯಾಯಾಲಯದಲ್ಲಿ ಅಬ್ಬಾಸ್ ಕಜ್ಮಿಯವರನ್ನು ಕಸಬ್ ಪರ ವಾದಿಸಲು ನ್ಯಾಯಾಲಯವು ನೇಮಕ ಮಾಡಿತ್ತು. ನಂತರ ಕೆ.ಪಿ. ಪವಾರ್ ವಾದಿಸಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಲಿರುವುದರಿಂದ ಹೈಕೋರ್ಟ್ ಪ್ಯಾನೆಲ್‌ನ ಯಾವುದೇ ಹಿರಿಯ ವಕೀಲರನ್ನು ಕಸಬ್ ಆಯ್ಕೆ ಮಾಡಬಹುದಾಗಿದೆ ಎಂದು ನ್ಯಾಯವಾದಿಯೊಬ್ಬರು ತಿಳಿಸಿದ್ದಾರೆ.

ಕಸಬ್ ತನ್ನ ಪರ ವಾದಿಸಲು ಆಯ್ಕೆ ಮಾಡುವ ನ್ಯಾಯವಾದಿಗಳಿಗೆ ಶುಲ್ಕ ಪಾವತಿಸುವುದಿಲ್ಲ. ಅದನ್ನು ಸರಕಾರವೇ ವಹಿಸಿಕೊಳ್ಳುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ