ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಕ್ಷಮಾದಾನ ಅರ್ಜಿ ಕೊನೆಗೂ ಕೇಂದ್ರಕ್ಕೆ ಹಸ್ತಾಂತರ (Delhi govt | mercy plea | Parliament attack | Afzal Guru)
Bookmark and Share Feedback Print
 
ಸಂಸತ್ ದಾಳಿ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಅಫ್ಜಲ್ ಗುರು ಕ್ಷಮಾದಾನ ಅರ್ಜಿಯ ಕುರಿತು ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರಕಾರ ಕಳುಹಿಸಿದ್ದ ಕಡತವನ್ನು ನಾಲ್ಕು ವರ್ಷಗಳ ನಂತರ ಕೊನೆಗೂ ದೆಹಲಿಯ ಕಾಂಗ್ರೆಸ್ ಸರಕಾರವು ಇದೀಗ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದೆ.

ಅಫ್ಜಲ್ ಗುರುವಿಗೆ ಸುಪ್ರೀಂ ಕೋರ್ಟ್ ವಿಧಿಸಿರುವ ಮರಣ ದಂಡನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಪ್ರತಿಕ್ರಿಯೆಯನ್ನು ಲಗತ್ತಿಸಿದ್ದ ದೆಹಲಿ ಸರಕಾರವು ಕಡತವನ್ನು ಲೆಫ್ಟಿನೆಂಟ್ ಗವರ್ನರ್ (ಕೇಂದ್ರಾಡಳಿತ ರಾಜ್ಯದ ರಾಜ್ಯಪಾಲ) ತೇಜಿಂದರ್ ಖನ್ನಾರಿಗೆ ಕಳುಹಿಸಿತ್ತು. ಇದೀಗ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ಕಡತವನ್ನು ಹಸ್ತಾಂತರಿಸಿದ್ದಾರೆ.
PR

ಅಫ್ಜಲ್ ಗುರು ಕ್ಷಮಾದಾನ ಅರ್ಜಿಯ ಕುರಿತು ಮುಂದಿನ ಕ್ರಮಕ್ಕಾಗಿ ಕಡತವನ್ನು ಲೆಫ್ಟಿನೆಂಟ್ ಗವರ್ನರ್ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ.

2001ರ ಡಿಸೆಂಬರ್ 13ರಂದು ರಾಷ್ಟ್ರದ ಶಕ್ತಿಕೇಂದ್ರ ಸಂಸತ್ತಿಗೆ ನಡೆದ ದಾಳಿ ಹಿಂದಿನ ರೂವಾರಿ ಅಫ್ಜಲ್ ಗುರುವಿಗೆ ಮರಣ ದಂಡನೆ ವಿಧಿಸಬೇಕೆಂದು ವಿಚಾರಣಾಧೀನ ನ್ಯಾಯಾಲಯವು ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನು 2005ರಲ್ಲಿ ಸರ್ವೋಚ್ಚ ನ್ಯಾಯಾಲಯವೂ ಖಚಿತಪಡಿಸಿತ್ತು.

ಎಂಟು ವರ್ಷಗಳ ಹಿಂದೆ ಅಂದರೆ 2002ರ ಡಿಸೆಂಬರ್ 18ರಂದು ಗುರುವಿಗೆ ಮರಣ ದಂಡನೆ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು. ದೇಶದ ವಿರುದ್ಧ ಯುದ್ಧ ಸಾರಿದ್ದು ಮತ್ತು ಹತ್ಯಾ ಆರೋಪಗಳನ್ನು ಆತನ ಮೇಲೆ ಹೊರಿಸಲಾಗಿತ್ತು.

ಆತನ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ 2003ರ ಅಕ್ಟೋಬರ್ 29ರಂದು ಹಾಗೂ ಸುಪ್ರೀಂ ಕೋರ್ಟ್ 2005ರ ಆಗಸ್ಟ್ ನಾಲ್ಕರಂದು ತಿರಸ್ಕರಿಸಿತ್ತು. 2006ರ ಅಕ್ಟೋಬರ್ 20ರಂದು ಗುರುವನ್ನು ಗಲ್ಲಿಗೆ ಹಾಕಬೇಕೆಂದು ನ್ಯಾಯಾಲಯ ಮುಹೂರ್ತವನ್ನೂ ನಿಗದಿಪಡಿಸಿತ್ತು.

ಆದರೆ ಅಫ್ಜಲ್ ಗುರು ಪತ್ನಿ ತಬಾಸಮ್ ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಳು. ಹಾಗಾಗಿ ಗುರು ಮರಣ ದಂಡನೆ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಯಿತು.

ಕಾಶ್ಮೀರದ ಸೋಪೋರೆ ನಿವಾಸಿಯಾಗಿರುವ ಅಫ್ಜಲ್ ಗುರು ಮಾತ್ರ ಈ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ಪಡೆದುಕೊಂಡಿರುವುದು. ಎಸ್ಎಆರ್ ಗಿಲಾನಿ ಮತ್ತು ಅಫ್ಸಾನ್ ಗುರು ಎಂಬ ಇಬ್ಬರು ಸಾಕ್ಷ್ಯಾಧಾರಗಳ ಕೊರತೆಯಿಂದ ಹೈಕೋರ್ಟ್‌ನಲ್ಲಿ ಖುಲಾಸೆಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ