ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೈಂಗಿಕ ಕಿರುಕುಳ ಪ್ರಕರಣ: ರಾಥೋಡ್ 3 ವಾರ ಜಾಮೀನಿಲ್ಲ (Haryana police | SPS Rathore | Ruchika Girhotra | Haryana High Court)
Bookmark and Share Feedback Print
 
1990ರ ರುಚಿಕಾ ಗಿರೋತ್ರಾ ಲೈಂಗಿಕ ಕಿರುಕುಳ ಪ್ರಕರಣದ ಅಪರಾಧಿಯಾಗಿರುವ ಹರ್ಯಾಣ ಪೊಲೀಸ್ ಇಲಾಖೆಯ ಮಾಜಿ ಮುಖ್ಯಸ್ಥ ಎಸ್.ಪಿ.ಎಸ್. ರಾಥೋಡ್ ಸಲ್ಲಿಸಿದ್ದ ಜಾಮೀನು ಮತ್ತು ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಹರ್ಯಾಣ ಹೈಕೋರ್ಟ್ ಶುಕ್ರವಾರ ಮುಂದೂಡಿದೆ. ಇದರಿಂದಾಗಿ ಕನಿಷ್ಠ ಜೂನ್ 29ರವರೆಗೆ ಅವರು ಜೈಲಿನಲ್ಲೇ ಉಳಿದುಕೊಳ್ಳಲಿದ್ದಾರೆ.

ಜೂನ್ 29ರಂದು ಇನ್ನೊಂದು ಸೂಕ್ತ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಲಿದೆ ಎಂದು ಹೈಕೋರ್ಟ್ ರಜಾಕಾಲದ ಪೀಠವು ತಿಳಿಸಿದೆ. ಹಾಗಾಗಿ ಅದುವರೆಗೆ ಜಾಮೀನು ಅರ್ಜಿಯ ವಿಚಾರಣೆ ನಡೆಯುವುದಿಲ್ಲ.

ಉಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ. ಆದ್ದರಿಂದ ಈಗ ಪ್ರಕರಣವನ್ನು ಖಾಯಂ ಪೀಠವು ವಿಚಾರಣೆ ನಡೆಸಲಿದೆ. ಅಲ್ಲದೆ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದಲ್ಲಿನ ಸಂಪೂರ್ಣ ದಾಖಲೆಗಳನ್ನು ತನಿಖೆಗಾಗಿ ಒಪ್ಪಿಸುವಂತೆ ಆದೇಶ ನೀಡಿದೆ ಎಂದು ಸಿಬಿಐ ವಕೀಲ ಅಜಯ್ ಕೌಶಿಕ್ ತಿಳಿಸಿದ್ದಾರೆ.

ಜೂನ್ 29ರವರೆಗೆ ರಾಥೋಡ್ ಜೈಲಿನಲ್ಲೇ ಇರಬೇಕಾಗುತ್ತದೆ. ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ಅವರು ಇತರ ಯಾವುದೇ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಚಂಡೀಗಢದ ಬರಿಯಲ್ ಜೈಲ್‌ನಲ್ಲಿರುವ 68ರ ಹರೆಯದ ರಾಥೋಡ್ ಪ್ರಸಕ್ತ ಬಹುತೇಕ ದೋಷಿಗಳೆಂದು ತೀರ್ಪು ಪಡೆದುಕೊಂಡಿರುವ ಇತರ ಏಳು ಕೈದಿಗಳೊಂದಿಗೆ ಕೊಠಡಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ರಾಥೋಡ್‌ಗೆ ಇತರ ಕೈದಿಗಳಿಗೆ ನೀಡುವ ಸಾಮಾನ್ಯ ಉಪಚಾರವನ್ನಷ್ಟೇ ನೀಡಲಾಗುತ್ತಿದೆ. ಗಣ್ಯರ ಅಥವಾ ಅತಿ ಗಣ್ಯರ ಆತಿಥ್ಯಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಮೂಲಗಳು ತಿಳಿಸಿವೆ.

1990ರಲ್ಲಿ ಇಲ್ಲಿಗೆ ಸಮೀಪದ ಪಂಚಕುಳಾ ನಗರದಲ್ಲಿ ಅಪ್ರಾಪ್ತ ಬಾಲಕಿ ರುಚಿಕಾ ಗಿರೋತ್ರಾಳಿಗೆ ಹರ್ಯಾಣದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಲೈಂಗಿಕ ಕಿರುಕುಳ ನೀಡಿದ್ದರು. ಇದೇ ಕಾರಣದಿಂದ ಬಾಲಕಿ ಗಿರೋತ್ರಾ ಮೂರು ವರ್ಷಗಳ ನಂತರ ಆತ್ಮಹತ್ಯೆಗೆ ಶರಣಾಗಿದ್ದಳು.

ಪ್ರಕರಣದ ವಿಚಾರಣೆ ನಡೆಸಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ರಾಥೋಡ್‌ಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಇದನ್ನು ಅವರ ಪತ್ನಿ ಹಾಗೂ ವಕೀಲೆ ಅಭಾ ರಾಥೋಡ್ ತೀವ್ರವಾಗಿ ವಿರೋಧಿಸಿದ್ದಲ್ಲದೆ, ಮೇ 26ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಈ ಹಿಂದೆ ಪ್ರಕಟಿಸಲಾಗಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು 18 ತಿಂಗಳಿಗೆ ವಿಸ್ತರಿಸಿರುವುದನ್ನು ಮರು ಪರಿಶೀಲನೆ ನಡೆಸುವಂತೆ ಅವರು ಮನವಿ ಮಾಡಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ