ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಚ್ಐವಿ ಪೀಡಿತ ಮಗುವನ್ನು ಲಕ್ಷಕ್ಕೆ ಮಾರಿದ ಅನಾಥಾಶ್ರಮ!
(Pune | Orphanage | HIV positive | Gurukul Godavari Orphanage)
ಅನಾಥಾಶ್ರಮಗಳು ಮಕ್ಕಳ ಮಾರಾಟದ ಅಡ್ಡೆಗಳಾಗುತ್ತಿವೆ ಎಂಬ ಆರೋಪಗಳೇನೂ ಹೊಸದಲ್ಲ. ಅಂತಹುದೇ ಒಂದು ಪ್ರಕರಣ ಇದೀಗ ಪುಣೆಯಲ್ಲಿ ಪತ್ತೆಯಾಗಿರುವ ಬೆನ್ನಿಗೆ ಮಾರಾಟ ಮಾಡಿರುವುದು ಎಚ್‌ಐವಿ ಪೀಡಿತ ಮಗುವನ್ನು ಎಂಬುದು ತಿಳಿದು ಬಂದಿದೆ.
ಆರು ತಿಂಗಳ ಹಿಂದಷ್ಟೇ ಪುಣೆಯಲ್ಲಿನ ಅನಾಥಾಲಯದಿಂದ ವೇದ್ ಎಂಬ ಬಾಲಕನನ್ನು ಮುಂಬೈಯ ಅರುಣ್ ಮತ್ತು ಅನಿತಾ ಯಾದವ್ ಎಂಬ ದಂಪತಿ ದತ್ತು ಪಡೆದುಕೊಂಡಿದ್ದರ. ಅದಕ್ಕಾಗಿ ಅನಾಥಾಶ್ರಮವು ಒಂದು ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿತ್ತು.
ದತ್ತು ಪಡೆದುಕೊಂಡ ಕೆಲವೇ ತಿಂಗಳಲ್ಲಿ ಮಗು ಸಾವನ್ನಪ್ಪಿತ್ತು. ಈ ಹೊತ್ತಿನಲ್ಲಿ ತಿಳಿದು ಬಂದ ವಿಚಾರವೆಂದರೆ ಮಗು ಎಚ್ಐವಿ ಪಾಸಿಟಿವ್ ಆಗಿತ್ತು ಎನ್ನುವುದು.
ಈಗ ದಂಪತಿ ಪುಣೆಯ 'ಗುರುಕುಲ ಗೋದಾವರಿ ಅನಾಥಾಶ್ರಮ'ದ ವಿರುದ್ಧ ಪೊಲೀಸ್ ಕೇಸು ದಾಖಲಿಸಿದ್ದಾರೆ. ಮಗುವನ್ನು ತಮಗೆ ನೀಡುವ ಹೊತ್ತಿನಲ್ಲಿ ಎಚ್ಐವಿ ಹೊಂದಿದ್ದ ವಿಚಾರವನ್ನು ಮುಚ್ಚಿಡಲಾಗಿತ್ತು ಎನ್ನುವುದು ದತ್ತು ಪಡೆದುಕೊಂಡಿದ್ದವರ ಆರೋಪ.
ಆದರೆ ತಾವು ಮಗುವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿರುವುದು ಹೌದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ನಾವು ಪುಣೆಯಲ್ಲಿನ ಸಾಸೂನ್ ಎಂಬಲ್ಲಿಗೆ ಹೋಗಿದ್ದೆವು. ಅಲ್ಲಿಗೆ ಹೋದಾಗ ನಮ್ಮನ್ನು ಭೇಟಿಯಾದ ವ್ಯಕ್ತಿಯೊಬ್ಬ ನಿರ್ದಿಷ್ಟ ಸಂಪರ್ಕ ಸಂಖ್ಯೆಯನ್ನು ನೀಡಿದ್ದ. ಮಗುವಿನ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿಗಳಾಗುತ್ತವೆ. ಆದರೆ ನೀವು ನಮಗೆ ಈಗ 30,000 ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ ಮೊತ್ತವನ್ನು ಮಗುವನ್ನು ನೀಡುವಾಗ ಕೊಡಿ ಎಂದು ಹೇಳಿದ್ದ ಎಂದು ಅನಿತಾ ಯಾದವ್ ವಿವರಿಸಿದ್ದಾರೆ.
ಈ ಸಂಬಂಧ 'ಗುರುಕುಲ ಗೋದಾವರಿ ಅನಾಥಾಶ್ರಮ'ದ ನಿರ್ದೇಶಕ ಮ್ಯಾಥ್ಯೂ ಯನ್ಮಾಲ್ ಅವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗೆ ಆಶ್ರಮ ನಡೆಸಲು ಯಾವುದೇ ಪರವಾನಗಿ ಇಲ್ಲ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ. ಆತ ಎಷ್ಟು ಮಕ್ಕಳನ್ನು ಮಾರಾಟ ಮಾಡಿದ್ದೇನೆ ಎಂಬುದರ ಕುರಿತೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಯೆರವಾಡದ ಪೊಲೀಸ್ ಅಧಿಕಾರಿ ದೀಪಕ್ ಸಾವಂತ್ ತಿಳಿಸಿದ್ದಾರೆ.