ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂಡಿಯನ್ ಮುಜಾಹಿದೀನ್ ಭಯೋತ್ಪಾದನಾ ಸಂಘಟನೆಯಂತೆ! (Indian Mujahideen | terrorist organization | India | Pakistan)
Bookmark and Share Feedback Print
 
ಇಂಡಿಯನ್ ಮುಜಾಹಿದೀನ್ ಎಂಬ ಭಯೋತ್ಪಾದನಾ ಸಂಘಟನೆಯ ದುಷ್ಕೃತ್ಯಗಳಿಗೆ ದೇಶದಾದ್ಯಂತ ನೂರಾರು ಅಮಾಯಕರು ಬಲಿಯಾದ ನಂತರವೂ ನಿಷೇಧದ ಅಗತ್ಯವಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಕೊನೆಗೂ ತನ್ನ ನಿಲುವನ್ನು ಬದಲಾಯಿಸಿದೆ.

1967ರ ಕಾನೂನು ವಿರೋಧಿ ಚಟುವಟಿಕೆಗಳ ಕಾಯ್ದೆ ಅನ್ವಯ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲಾಗಿದೆ. ಭಾರತ ಸರಕಾರವು ಈ ಹಿಂದೆ ಪ್ರಕಟಿಸಿರುವ ಭಯೋತ್ಪಾದನಾ ಸಂಘಟನೆಗಳ ಪಟ್ಟಿಗೆ ಇಂಡಿಯನ್ ಮುಜಾಹಿದೀನ್ ಮತ್ತು ಅದರ ಸಹ ಸಂಸ್ಥೆಗಳು ಸೇರ್ಪಡೆಯಾಗಿವೆ ಎಂದು ಗೃಹ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಹಲವು ಬಾರಿ ಭಾರತದಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯಿಂದ ಕುಕೃತ್ಯಗಳು ನಡೆದಾಗ ನಿಷೇಧದ ಕುರಿತು ಕೇಂದ್ರ ಸರಕಾರ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ಇದೇ ವರ್ಷದ ಫೆಬ್ರವರಿಯಲ್ಲಿ ಪುಣೆಯ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟದ ನಂತರ ಸರಕಾರ ಈ ನಿರ್ಣಯಕ್ಕೆ ಬಂದಿದೆ.

ಇಂಡಿಯನ್ ಮುಜಾಹಿದೀನ್ ನಿಷೇಧವನ್ನು ಸರಕಾರ ಇದುವರೆಗೆ ಪರಿಗಣಿಸಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಫೆಬ್ರವರಿಯಲ್ಲಿ ತಿಳಿಸಿದ್ದರು.

2005ರ ಫೆಬ್ರವರಿ 23ರಂದು ವಾರಣಾಸಿಯಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಇಂಡಿಯನ್ ಮುಜಾಹಿದೀನ್ ಬೆಳಕಿಗೆ ಬಂದಿತ್ತು. ಆ ಬಳಿಕ ಕಳೆದ ಐದು ವರ್ಷಗಳಲ್ಲಿ ಈ ಸಂಘಟನೆ ದೇಶದ ಉದ್ದಗಲಕ್ಕೂ ಹತ್ತಾರು ಸ್ಫೋಟಗಳನ್ನು ನಡೆಸಿದೆ. ಇದರ ಸಂಸ್ಥಾಪಕ ಕರ್ನಾಟಕದ ಭಟ್ಕಳದ ರಿಯಾಜ್ ಭಟ್ಕಳ್ ಎಂದು ಹೇಳಲಾಗುತ್ತಿದೆ.

2007ರ ನವೆಂಬರ್ 23ರಂದು ಉತ್ತರ ಪ್ರದೇಶದಲ್ಲಿ ಸರಣಿ ಸ್ಫೋಟ, 2008ರ ಮೇ 13ರ ಜೈಪುರ ಸ್ಫೋಟ, ಅದೇ ವರ್ಷದ ಜುಲೈ 25ರಂದು ಬೆಂಗಳೂರು ಮತ್ತು ಮರುದಿನ ಅಹಮದಾಬಾದ್ ಸರಣಿ ಸ್ಫೋಟ, 2008ರ ಸೆಪ್ಟೆಂಬರ್ 13ರಂದು ದೆಹಲಿ ಸರಣಿ ಸ್ಫೋಟ ಮತ್ತು ಫೆಬ್ರವರಿ 13ರ ಪುಣೆ ಸ್ಫೋಟ ಆರೋಪಗಳನ್ನು ಇಂಡಿಯನ್ ಮುಜಾಹಿದೀನ್ ಹೊತ್ತುಕೊಂಡಿದ್ದರೂ ನಿಷೇಧ ಹೇರಲು ಕೇಂದ್ರ ಸರಕಾರ ಈ ಹಿಂದೆ ನಿರಾಕರಿಸಿತ್ತು.

ಇಂಡಿಯನ್ ಮುಜಾಹಿದೀನ್ ಸಂಘಟನೆಯು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಸಿಮಿ, ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ (ಹುಜಿ) ಭಾಗವಾಗಿರುವುದರಿಂದ ಪ್ರತ್ಯೇಕ ನಿಷೇಧ ಹೇರುವುದು ಅನಗತ್ಯ ಎಂಬುದು ಕೇಂದ್ರದ ವಾದವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ