ಇದೇ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಘೋಷಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಭೇಟಿಯ ಸಂದರ್ಭ ಬೆಂಗಳೂರಿಗೂ ಆಗಮಿಸುವ ನಿರೀಕ್ಷೆಯಿದೆ. ಒಬಾಮಾ ಬೆಂಗಳೂರಿಗೆ ಭೇಟಿ ನೀಡಿದ್ದೇ ಆದಲ್ಲಿ, ಬೆಂಗಳೂರಿಗೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಅವರಾಗಲಿದ್ದಾರೆ.
ಮೂಲಗಳ ಪ್ರಕಾರ, ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಒಬಾಮಾ ಭೇಟಿ ನೀಡಲು ನಿರ್ಧರಿಸುವ ಹಿನ್ನೆಲೆಯಲ್ಲಿ ಅಮೆರಿಕ ಅಧಿಕಾರಿಗಳ ತಂಡ ಇದೀಗ ಭೇಟಿ ನೀಡಲು ಉದ್ದೇಶಿಸಿರುವ ನಗರಗಳ ಪಟ್ಟಿ ತಯಾರಿಸಿದ್ದು ಆ ಪಟ್ಟಿಯಲ್ಲಿ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಪಾಟ್ನಾ ನಗರಗಳು ಸೇರಿವೆ ಎನ್ನಲಾಗಿದೆ. ಜೊತೆಗೆ ತಂಡ ಒಬಾಮಾ ಭೇಟಿಗೂ ಮೊದಲೇ ಈ ತಿಂಗಳಲ್ಲೇ ಈ ನಗರಗಳಿಗೆ ಭೇಟಿ ನೀಡಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ.
ಒಬಾಮಾರನ್ನು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಭೇಟಿ ಮಾಡಿದ ಸಂದರ್ಭ ಬೆಂಗಳೂರಿನೆಡೆಗೆ ಒಬಾಮಾ ಅವರ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಅಮೆರಿಕದ ಸಾಕಷ್ಟು ಕಂಪನಿಗಳು ಬೆಂಗಳೂರಿನಿಂದ ಸಾಕಷ್ಟು ಲಾಭ ಪಡೆಯುತ್ತಿವೆ ಎಂಬ ವಿಚಾರಗಳನ್ನು ಕೃಷ್ಣ ಅವರು ಒಬಾಮಾರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಇದೀಗ ಒಬಾಮಾರ ಗಮನ ಬೆಂಗಳೂರಿನತ್ತ ತಿರುಗಿದೆ ಎನ್ನಲಾಗುತ್ತಿದೆ.
ಇದೇ ಸಂದರ್ಭ ಒಬಾಮಾ, ನೀವು ಬೆಂಗಳೂರನ್ನು ವಿಶ್ವ ಭೂಪಟದಲ್ಲಿ ಗುರುತಿಸಬಲ್ಲ ನಗರವಾಗಿ ಬೆಳೆಸಿದ ರೀತಿ ಶ್ಲಾಘನೀಯ ಎಂದು ಕೃಷ್ಣ ಅವರ ಬೆನ್ನು ತಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಐಟಿ ಬಿಟಿ ಮೂಲಕ ವಿಶ್ವ ಭೂಪಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಇದೂ ಕೂಡಾ ಒಬಾಮಾರನ್ನು ಭೇಟಿಯತ್ತ ಸೆಳೆದಿದೆ. ಅಷ್ಟೇ ಅಲ್ಲದೆ, ಬೆಂಗಳೂರಿನ ಕೆಲವು ಐಟಿ ದೈತ್ಯ ಸಂಸ್ಥೆಗಳು ಒಬಾಮಾರಿಗೆ ಬೆಂಗಳೂರಿಗೆ ಆಹ್ವಾನ ನೀಡಿವೆ ಎನ್ನಲಾಗಿದೆ.
ಒಂದು ವರ್ಷ ಹಿಂದೆ ‘ಬೆಂಗಳೂರು ಸಾಕು; ಬಫೆಲೊ ಬೇಕು’ ಎಂಬ ಹೇಳಿಕೆ ನೀಡಿ ಸಾಕಷ್ಟು ಅಪಾರ್ಥಗಳಿಗೆ ಎಡೆಮಾಡಿಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಅದನ್ನು ತಿಳಿಗೊಳಿಸುವ ಮುಖ್ಯ ಉದ್ದೇಶದೊಂದಿಗೆ ನವೆಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.
2000ನೇ ಇಸವಿಯಲ್ಲೇ ಕರ್ನಾಟಕ ಮುಖ್ಯಮಂತ್ರಿಯಾಗಿದ್ದಾಗಲೇ ಕೃಷ್ಣ ಅವರು ಆಗಿನ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಬೆಂಗಳೂರಿಗೆ ಕರೆತರಲು ಪ್ರಯತ್ನಿಸಿದ್ದರು. ಆದರೆ ಆಂಧ್ರ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಕ್ಲಿಂಟನ್ ಅವರನ್ನು ಹೈದರಾಬಾದ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ನಂತರ 2005ರಲ್ಲೂ ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು.ಬುಷ್ ಅವರನ್ನು ವೈ.ಎಸ್.ರಾಜಶೇಖರ ರೆಡ್ಡಿ ಕೂಡಾ ಕೇಂದ್ರದ ನೆರವಿನೊಂದಿಗೆ ಹೈದರಾಬಾದ್‌ಗೆ ಕರೆಸಿದ್ದರು. ಆದರೆ ಬೆಂಗಳೂರಿಗೆ ಯಾವೊಬ್ಬ ಅಮೆರಿಕ ಅಧ್ಯಕ್ಷನೂ ಇದುವರೆಗೆ ಭೇಟಿ ನೀಡಿರಲಿಲ್ಲ. ಇದೇ ವೇಳೆ ಈ ಬಾರಿ ನೆರೆಯ ತಮಿಳು ನಾಡು ಮುಖ್ಯಮಂತ್ರಿ ಕರುಣಾನಿಧಿ ಕೂಡಾ ಚೆನ್ನೈ ಹಾಗೂ ಮಧುರೈಗೆ ಒಬಾಮಾರನ್ನು ಕರೆತರುವ ಪ್ರಯತ್ನ ನಡೆಸಿದ್ದಾರೆ.
ನಭಾಷೆ, ಧರ್ಮ, ಪುರಾಣ, ತತ್ವಜ್ಞಾನ, ಕಾನೂನು, ಆಚರಣೆ, ಪ್ರಾಚೀನ ಕಲೆ, ವಿಜ್ಞಾನ, ತಂತ್ರಜ್ಞಾನ ಹೀಗೆ ಯಾವುದೇ ಕ್ಷೇತ್ರದ ವಿಶೇಷ ಅಧ್ಯಯನಕ್ಕೆ ಒಂದು ವಿಷಯವನ್ನು ಆರಿಸಿದರೂ ಭಾರತ ತನ್ನತ್ತ ಸೆಳೆಯುತ್ತದೆ. ಮಾನವ ಇತಿಹಾಸಕ್ಕೆ ಸಂಬಂಧಿಸಿದ ಅಮೂಲ್ಯ ಜ್ಞಾನ ಬಂಢಾರ ಭಾರತದಲ್ಲಿ ಮಾತ್ರ ಅಡಗಿದೆ. ಹೀಗಾಗಿ ಭಾರತಕ್ಕೆ ಭೇಟಿ ನೀಡಲು ನಾನು ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ.
ಭಾರತದ ಪುರಾತನ ಸಂಸ್ಕೃತಿಯನ್ನು ಅನುಭವಿಸಲು ನಾನು ಕಾಯುತ್ತಿದ್ದೇನೆ. ಮುಂದಿನ ಪೀಳಿಗೆಗೆ ಕಾಯ್ದಿರಿಸಬೇಕಾದ ಇತಿಹಾಸ ಹಾಗೂ ಪ್ರಗತಿ ಎರಡನ್ನೂ ಜಂಟಿಯಾಗಿ ಸಾಧಿಸುವುದೇ ನನ್ನ ಭೇಟಿಯ ಉದ್ದೇಶ ಎಂದಿದ್ದಾರೆ.