ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿರುಪತಿ ತಿಮ್ಮಪ್ಪ ಭಕ್ತರಿಗಿನ್ನು ಸೀರೆ, ಧೋತಿ ಕಡ್ಡಾಯ..!? (Tirupati | Lord Balaji | Hindu temple | dress code)
Bookmark and Share Feedback Print
 
ಪ್ರಪಂಚದ ಶ್ರೀಮಂತ ದೇವರು ಎಂದೇ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪ ದೇವಳಕ್ಕೆ ಬರುವ ಭಕ್ತಾದಿಗಳಿಗೆ ಡ್ರೆಸ್ ಕೋಡ್ ಅಳವಡಿಸಬೇಕೆಂಬುದು ಇಂದು ನಿನ್ನೆಯ ಕೂಗಲ್ಲ. ಅಶ್ಲೀಲ ದಿರಿಸುಗಳಿಂದ ಯುವ ಜನತೆ, ಚಿತ್ರನಟಿಯರಾದಿಯಿಂದೆಲ್ಲರೂ ಪವಿತ್ರ ಸ್ಥಳವನ್ನು ಕುಲಗೆಡಿಸುತ್ತಿದ್ದಾರೆ ಎನ್ನುವ ದೇವಳದ ಆಡಳಿತ ಮಂಡಳಿಯ ಒಂದು ಬಣ ಇದಕ್ಕಾಗಿ ಕಳೆದ ಹತ್ತಾರು ವರ್ಷಗಳಿಂದ ಪ್ರಯತ್ನ ಪಡುತ್ತಲೇ ಇದೆ.

ಅದೇ ರೀತಿ ಈ ಬಾರಿಯೂ ಪ್ರಯತ್ನವನ್ನು ಮುಂದುವರಿಸಿದ್ದು, ಯಶಸ್ವಿಯಾಗುವ ಭರವಸೆಯನ್ನು ಹೊಂದಿದೆ. ಅದರ ಪ್ರಕಾರ ಮಹಿಳೆಯರು ಸೀರೆ ಮತ್ತು ಸಲ್ವಾರ್ (ಚೂಡಿದಾರ) ಸೇರಿದಂತೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಪುಗಳನ್ನು ಧರಿಸಲು ಅವಕಾಶವಿದೆ. ಪುರುಷರು ಧೋತಿ ಧರಿಸಬಹುದಾಗಿದೆ.
WD

ಇದರ ಹೊರತಾಗಿ ಬಿಗಿಯಾದ ಜೀನ್ಸ್ ಪ್ಯಾಂಟುಗಳು, ಟಿ-ಶರ್ಟ್, ತುಂಡು ಲಂಗಗಳು, ಬರ್ಮುಡಾಗಳು ಸೇರಿದಂತೆ ಆಧುನಿಕ ಉಡುಪುಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ.

ಇತ್ತೀಚೆಗಷ್ಟೇ 'ಡಯಲ್ ಯುವರ್ ಎಕ್ಸಿಕ್ಯೂಟಿವ್ ಆಫೀಸರ್' ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ದೇವಳದ ಕಾರ್ಯನಿರ್ವಹಣಾಧಿಕಾರಿ ಐ.ವೈ.ಆರ್. ಕೃಷ್ಣ ರಾವ್, ಮಹಿಳೆಯರು ಸಭ್ಯ ದಿರಿಸುಗಳನ್ನು ಧರಿಸುವಂತೆ ಮನವಿ ಮಾಡಿದ್ದಾರೆ.

ಕೆಲವು ಸ್ತ್ರೀಯರು ದೇವರ ದರ್ಶನಕ್ಕೆ ಬರುವ ಸಂದರ್ಭದಲ್ಲಿ ಪ್ರಚೋದನಾಕಾರಿಯೆನಿಸುವ ಬಿಗಿಯಾದ ಜೀನ್ಸ್ ಮತ್ತು ಪಾರದರ್ಶಕ ಉಡುಪುಗಳನ್ನು ಧರಿಸಿಕೊಂಡು ಬರುತ್ತಾರೆ. ದೇವಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಮಹಿಳೆಯರು ಸೀರೆ ಮತ್ತು ಪುರುಷರು ಧೋತಿ ಧರಿಸುವುದು ನಮ್ಮ ಸಂಪ್ರದಾಯ. ಆದರೆ ಹಲವರು ತಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ರಾವ್ ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಭ್ಯ ದಿರಿಸುಗಳೊಂದಿಗೆ ಬರುವವರನ್ನು ದೇವಳದ ಒಳಗೆ ಬರಲು ಅವಕಾಶ ನೀಡದಂತೆ ನಾವು ನಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಲಿದ್ದೇವೆ. ಬರ್ಮುಡಾಗಳು, ಶಾರ್ಟ್ಸ್, ಟಿ-ಶರ್ಟ್ಸ್, ಬಿಗಿಯಾದ ಉಡುಪುಗಳು, ಪಾರದರ್ಶಕ ಉಡುಪು ಧರಿಸಿದವರನ್ನು ದೇವರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದಾಗಿದೆ ಎಂದು ಕೃಷ್ಣ ರಾವ್ ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರು ಅಸಭ್ಯವಾಗಿ ದೇಹ ಪ್ರದರ್ಶನಕ್ಕೆ ಅವಕಾಶವಿರುವಂತಹ ಬಟ್ಟೆಗಳನ್ನು ತೊಟ್ಟು ದೇವರ ದರ್ಶನಕ್ಕೆ ಬರುತ್ತಾರೆ. ಇದರಿಂದಾಗಿ ಭಕ್ತರ ಏಕಾಗ್ರತೆಗೆ ಮತ್ತು ಸ್ಥಳದ ಪಾವಿತ್ರ್ಯಕ್ಕೆ ಭಂಗವಾಗುತ್ತದೆ ಎಂದು ಎರಡು ವರ್ಷಗಳ ಹಿಂದೆ ಆಂಧ್ರಪ್ರದೇಶದ ಅನಂತಪುರದ ಭಕ್ತರೊಬ್ಬರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಮತ್ತು ಇತರ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶೀಘ್ರದಲ್ಲೇ ಈ ಕುರಿತು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ.

ಭಕ್ತರಿಂದ ಬೆಂಬಲ ದೊರೆತಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಡ್ರೆಸ್ ಕೋಡ್ ಜಾರಿಗೊಳಿಸಲು ದೇವಳದ ಆಡಳಿತ ಮಂಡಳಿ ಸಿದ್ಧವಿದೆ ಎಂದು ಕೃಷ್ಣ ರಾವ್ ತಿಳಿಸಿದ್ದಾರೆ.

ಬಿಜೆಪಿ ಸ್ವಾಗತ..
ಟಿಟಿಡಿ ನಿರ್ಧಾರವು ಬಿಜೆಪಿ, ಹಿಂದೂ ಸಂಘಟನೆಗಳು ಮತ್ತು ನೌಕರರ ಸಂಘಟನೆಗಳಿಗೆ ತೀವ್ರ ಸಂತಸ ತಂದಿದೆ. ಕಳೆದ ಹಲವು ವರ್ಷಗಳಿಂದ ತಿರುಪತಿಯಲ್ಲಿ ಡ್ರೆಸ್ ಕೋಡ್ ಜಾರಿಗೆ ತರುವಂತೆ ಬಿಜೆಪಿ ಆಗ್ರಹಿಸುತ್ತಾ ಬಂದಿತ್ತು.

ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದೇವೆ. ದೇವಾಲಯಕ್ಕೆ ಹೋಗುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಾಂಪ್ರದಾಯಿಕ ದಿರಿಸನ್ನು ತೊಡಬೇಕು. ಪವಿತ್ರ ತಿರುಮಲದಲ್ಲಿನ ಆಧ್ಯಾತ್ಮಿಕತೆಗೆ ಅಸಭ್ಯ ಉಡುಗೆ ಭಂಗ ತರುತ್ತದೆ ಎಂದು ಬಿಜೆಪಿ ನಾಯಕ ಭಾನುಪ್ರಕಾಶ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಡ್ರೆಸ್ ಕೋಡ್‌ಗೆ ವಿರೋಧ...
ಟಿಡಿಪಿಯ ಸಿಬ್ಬಂದಿಗಳಿಗೆ ಕೆಲ ವರ್ಷಗಳ ಹಿಂದೆಯೇ ಡ್ರೆಸ್ ಕೋಡ್ ಜಾರಿ ಮಾಡಲಾಗಿತ್ತು. ಅದರಂತೆ ಪುರುಷ ಸಿಬ್ಬಂದಿಗಳು ಬಿಳಿ ಧೋತಿ ಮತ್ತು ಬಿಳಿ ಅಂಗಿ ಧರಿಸಬೇಕು. ಮಹಿಳೆಯರು ಕಡ್ಡಾಯವಾಗಿ ಸೀರೆ ಉಡಬೇಕು.

ಅದೇ ಹೊತ್ತಿಗೆ ಭಕ್ತರಿಗೆ ಸಮವಸ್ತ್ರ ಕಡ್ಡಾಯಗೊಳಿಸುವ ಕ್ರಮಕ್ಕೆ ಆಡಳಿತ ಮಂಡಳಿಯಲ್ಲೇ ವಿರೋಧವಿದೆ. ಕೆಲವರ ಪ್ರಕಾರ ಈ ಡ್ರೆಸ್ ಕೋಡ್ ಅಗತ್ಯವಿಲ್ಲ. ದೇವರ ದರ್ಶನಕ್ಕೆಂದು ಬರುವ ಭಕ್ತಾದಿಗಳಿಗೆ ಯಾವ ಬಟ್ಟೆಯನ್ನು ಧರಿಸಬೇಕೆಂದು ಗೊತ್ತಿರುತ್ತದೆ, ಅವರಿಗೆ ತಿಳಿ ಹೇಳಬೇಕಾದ ಅಗತ್ಯವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಕೇರಳ ಸೇರಿದಂತೆ ಕೆಲವು ದೇವಸ್ಥಾನಗಳಲ್ಲಿ ಪುರುಷರು ಅಂಗಿ ತೆಗೆದು ಒಳ ಪ್ರವೇಶ ಮಾಡುವುದು ಕಡ್ಡಾಯವಾಗಿದೆ. ಇದನ್ನು ಮೊದಲು ನಿಷೇಧಿಸಿ. ನಂತರ ತಿರುಪತಿಗೆ ಡ್ರೆಸ್ ಕೋಡ್ ಜಾರಿ ಮಾಡಿ. ದೇವಸ್ಥಾನಗಳು ಪ್ರಾರ್ಥನೆಯ ಸ್ಥಳಗಳು, ಶಾಂತ ಮನಸ್ಥಿತಿಯನ್ನು ಕಂಡುಕೊಳ್ಳಬೇಕಾದ ಸ್ಥಳಗಳು. ಇಲ್ಲಿ ದೇವರ ದರ್ಶನಕ್ಕೋಸ್ಕರ ಭಕ್ತರು ಬರಬೇಕೇ ಹೊರತು, ಮಹಿಳೆಯರನ್ನು ನೋಡಲಲ್ಲ ಎಂದು ಭಕ್ತರೊಬ್ಬರು ಪ್ರಸ್ತಾವಿತ ಡ್ರೆಸ್ ಕೋಡ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ