ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಯಿ ಮಗುವಿಗೆ ಸ್ತನ್ಯಪಾನ ಮಾಡಿಸಲೇಬೇಕು: ಕೋರ್ಟ್ (breastfeed | child | Gujarat High Court | Sarita)
Bookmark and Share Feedback Print
 
ಅಕ್ರಮ ಸಂಬಂಧದಲ್ಲಿ ಹುಟ್ಟಿದ ಮಗು ಎಂಬ ಕಾರಣಕ್ಕೆ ಮಗು ಮತ್ತು ತಾಯಿಯನ್ನು ಆಕೆಯ ಹೆತ್ತವರು ಬೇರ್ಪಡಿಸುತ್ತಿರುವುದನ್ನು ಖಚಿತಪಡಿಸಿಕೊಂಡಿರುವ ಗುಜರಾತ್ ಹೈಕೋರ್ಟ್, ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸುವುದು ತಾಯಿಯ ಹಕ್ಕು ಎಂದು ಹೇಳಿದ್ದಲ್ಲದೆ ಇತರರಿಂದ ತೊಂದರೆಯಾಗುವ ಸಾಧ್ಯತೆಗಳಿದ್ದರೆ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು ಎಂದು ಆದೇಶ ನೀಡಿದೆ.

ಮಗುವಿನ ತಂದೆಯೊಂದಿಗೆ ತಮ್ಮ ಮಗಳ ಸಂಬಂಧವನ್ನು ಒಪ್ಪಿಕೊಳ್ಳದ ಕಾರಣದಿಂದ ಹೆತ್ತವರು ತಾಯಿ ಮತ್ತು ಮಗುವನ್ನು ಜತೆಯಾಗಿರಲು ಅವಕಾಶ ನೀಡುತ್ತಿಲ್ಲ. ಅದೇ ಕಾರಣದಿಂದ ಇತ್ತೀಚೆಗಷ್ಟೇ ಜನ್ಮ ನೀಡಿದ್ದ ತಾಯಿ ತನ್ನ ಮಗುವಿಗೆ ಎದೆ ಹಾಲು ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ತಾಯಿ ತನ್ನ ಮಗುವಿಗೆ ಹಾಲೂಡಿಸುವುದು ಹಕ್ಕು. ಇದನ್ನು ತಡೆಯಲು ಯಾರಿಗೂ ಅಧಿಕಾರವಿಲ್ಲ. ತಮ್ಮ ಮಗಳ ಜೀವನದಲ್ಲಿ ಹೆತ್ತವರು ಮಧ್ಯಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಬೇಕು. ಅಗತ್ಯ ಬಿದ್ದರೆ ಮಹಿಳಾ ಪೊಲೀಸರ ಸಹಕಾರವನ್ನು ಪಡೆದುಕೊಳ್ಳಬೇಕು ಎಂದು ಮಗು ಇರುವ ಆಸ್ಪತ್ರೆ ಸಿಬ್ಬಂದಿಗಳಿಗೆ ಕೋರ್ಟ್ ಆದೇಶ ನೀಡಿದೆ.

ಹೆತ್ತವರ ನಾಟಕವಿದು..
ಆಕೆಯ ಹೆಸರು ಸರಿತಾ. ಅಹಮದಾಬಾದ್‌ನ ವಾದಜ್ ಪ್ರದೇಶದ ವಿವಾಹಿತ ಮಾರ್ವಾಡಿ ಮಹಿಳೆ. ವಿವಾಹಿತೆ ಸರಿತಾ ಪಕ್ಕದ ಮನೆಯ ಮರಾಠಿ ಹುಡುಗ ಹಿತೇಶ್ ಜತೆ ಪರಾರಿಯಾಗಿದ್ದಳು. ಘಟನೆಯ ನಂತರ ಸರಿತಾ ಹೆತ್ತವರು ಗುಜರಾತ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಜುಲೈ 27ರಂದು ಆಕೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಆಕೆ ಹೆತ್ತವರ ಜತೆ ಹೋಗಲು ನಿರಾಕರಿಸಿದ್ದಳು. ಸರಿತಾ ಅಪ್ರಾಪ್ತೆಯಲ್ಲದ ಕಾರಣ ಆಕೆ ಹಿತೇಶ್ ಜತೆ ಜೀವನ ನಡೆಸಲು ಸ್ವತಂತ್ರಳು ಎಂದು ನ್ಯಾಯಾಲಯ ತಿಳಿಸಿತ್ತು.

ಸರಿತಾ ಮತ್ತು ಹಿತೇಶ್ ನ್ಯಾಯಾಲಯದ ಅನುಮತಿಯೊಂದಿಗೆ ಜತೆಯಾಗಿ ಜೀವನ ಸಾಗಿಸುತ್ತಿದ್ದರು. ಸ್ವಲ್ಪವೇ ಸಮಯದಲ್ಲಿ ಸರಿತಾ ಗರ್ಭಿಣಿಯಾಗಿದ್ದಳು. ಈ ಹೊತ್ತಿನಲ್ಲಿ ಗರ್ಭಿಣಿ ಸರಿತಾಳನ್ನು ಆರೈಕೆ ಮಾಡುವ ನೆಪದಲ್ಲಿ ಆಕೆಯ ಕುಟುಂಬ ಹಿತೇಶ್‌ನಿಂದ ಬೇರ್ಪಡಿಸಿತ್ತು.

ಹಿತೇಶ್ ಅತ್ಯಾಚಾರ ನಡೆಸಿದ್ದ..
ಹಿತೇಶ್‌ನಿಂದ ಸರಿತಾಳನ್ನು ದೂರ ಮಾಡಿದ ಕೆಲವೇ ದಿನಗಳಲ್ಲಿ ಹಿತೇಶ್ ಮತ್ತು ಆತನ ಇಬ್ಬರು ಗೆಳೆಯರ ಮೇಲೆ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಯಿತು. ಈ ಪ್ರಕರಣಗಳನ್ನು ದಾಖಲಿಸಿದ್ದು ಸ್ವತಃ ಸರಿತಾ.

ಈ ಹೊತ್ತಿನಲ್ಲಿ ನ್ಯಾಯಾಲಯದ ಮೊರೆ ಹೋದ ಹಿತೇಶ್, ಕಳೆದ ವರ್ಷ ನ್ಯಾಯಾಲಯವು ಸರಿತಾಳಿಗೆ ಹೆತ್ತವರೊಂದಿಗೆ ತೆರಳುವ ಅವಕಾಶ ನೀಡಿದರೂ ನನ್ನೊಂದಿಗೆ ಬಾಳ್ವೆ ನಡೆಸಿದ್ದನ್ನು ಉಲ್ಲೇಖಿಸುತ್ತಾ ಎಫ್ಐಆರ್ ವಜಾಗೊಳಿಸುವಂತೆ ಮನವಿ ಮಾಡಿದ.

ಆದರೂ ಹಿತೇಶ್‌ನನ್ನು ಫೆಬ್ರವರಿಯಲ್ಲಿ ಪೊಲೀಸರು ಬಂಧಿಸಿ ಸಾಬರಮತಿ ಸೆಂಟ್ರಲ್ ಜೈಲಿಗೆ ತಳ್ಳಿದರು. ತಕ್ಷಣವೇ ಮಧ್ಯಪ್ರವೇಶಿಸಿದ ನ್ಯಾಯಾಲಯವು ಹಿತೇಶ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಲ್ಲದೆ, ತನಿಖೆಗೆ ತಡೆಯಾಜ್ಞೆ ನೀಡಿತು.

ಇತ್ತೀಚೆಗಷ್ಟೇ ಸರಿತಾ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಹೆತ್ತವರ ಒತ್ತಾಯದ ಮೇರೆಗೆ ಆಕೆ ಮಗುವಿಗೆ ಎದೆ ಹಾಲು ನೀಡುತ್ತಿರಲಿಲ್ಲ. ಇದನ್ನು ಆಸ್ಪತ್ರೆಯು ನ್ಯಾಯಾಲಯಕ್ಕೆ ತಿಳಿಸಿತ್ತು.

ಸರಿತಾಳಿಗೆ ಹುಟ್ಟಿರುವ ಮಗು ನನ್ನದು ಮತ್ತು ನಾನು ಸರಿತಾಳೊಂದಿಗೆ ದಾಂಪತ್ಯ ಜೀವನ ನಡೆಸಲು ಸಿದ್ಧನಿರುವುದಾಗಿ ಹಿತೇಶ್ ಹೇಳುತ್ತಿದ್ದಾನೆ. ಆತನ ಪ್ರಕಾರ ಇದೆಲ್ಲ ಸರಿತಾಳ ಹೆತ್ತವರ ಕುತಂತ್ರ. ಪ್ರಕರಣದ ಮುಂದಿನ ವಿಚಾರಣೆ ಶೀಘ್ರದಲ್ಲೇ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ