ಸಿಕ್ಕಿಂನ ನಾಮ್ಚಿ ಎಂಬಲ್ಲಿ ನಡೆದ ಘಟನೆಯಿದು. ಸಿಗರೇಟು ಸೇದುವ ಚಟ ಬೆಳೆಸಿಕೊಂಡಿದ್ದ ಮಗನ ತುಟಿಗಳಿಗೆ ಹೊಲಿಗೆ ಹಾಕುವ ಮೂಲಕ ಭಯಂಕರ ಶಿಕ್ಷೆಯನ್ನೇ ತಂದೆ ನೀಡಿ ಇದೀಗ ಜೈಲು ಸೇರಿದ್ದಾನೆ.
12ರ ಹರೆಯದ ಪುತ್ರ ತನ್ನ ಮಲಗುವ ಕೋಣೆಯಲ್ಲಿ ಧೂಮಪಾನ ಮಾಡುತ್ತಿದ್ದುದನ್ನು ನೋಡಿದ ಜೊರೆತಾಂಗ್ ಎಂಬಲ್ಲಿನ ನೇತ್ರಾ ಬಹದ್ದೂರ್ ದರ್ಜಿ ಎಂಬಾತ ಬಾಯಿಯನ್ನು ಹೊಲಿದಿದ್ದಾನೆ ಎಂದು ದಕ್ಷಿಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತಿವಾರಿ ತಿಳಿಸಿದ್ದಾರೆ.
ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆಯಡಿ ಇದೀಗ ದರ್ಜಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐದನೇ ತರಗತಿಯ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗ ಸಿಕ್ಕಿ ಬೀಳುತ್ತಿದ್ದಂತೆ ಸೂಜಿಯೊಂದನ್ನು ತೆಗೆದುಕೊಂಡು ಮಗನ ತುಟಿಗಳನ್ನು ಹೊಲಿದಿದ್ದ ತಂದೆ, ಒಂದು ವೇಳೆ ಇದನ್ನು ಬಿಚ್ಚಲು ಆಸ್ಪತ್ರೆಗೇನಾದರೂ ಹೋದಲ್ಲಿ ಇದಕ್ಕಿಂತ ದೊಡ್ಡ ಸೂಜಿ ತೆಗೆದುಕೊಂಡು ನಿನ್ನ ತುಟಿಗಳನ್ನು ಹೊಲಿಯುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಹೆದರಿಕೊಂಡಿದ್ದ ಮಗ ರಾತ್ರಿಯಿಡೀ ತುಟಿಗಳಿಂದ ರಕ್ತ ವಸರುತ್ತಿದ್ದರೂ ಲೆಕ್ಕಿಸದೆ ಮರುದಿನ ಬೆಳಿಗ್ಗೆ ತಿಂಡಿ-ತೀರ್ಥವನ್ನೂ ಮಾಡದೆ ಶಾಲೆಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಗ್ರಾಮಸ್ಥರು ಮತ್ತು ಶಿಕ್ಷಕರು ವಿದ್ಯಾರ್ಥಿಯನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿ ಹೊಲಿಗೆಯನ್ನು ತೆಗೆಸಿದ್ದಾರೆ.
ನಂತರ ಆರೋಪಿ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರಾಮಸ್ಥರ ಪ್ರಕಾರ ಬಲಿಪಶು ಬಾಲಕನ ತಾಯಿ ಮತ್ತೊಬ್ಬ ವ್ಯಕ್ತಿಯ ಜತೆ ಪರಾರಿಯಾಗಿದ್ದಾಳೆ. ಬಾಲಕನ ತಂದೆ ದರ್ಜಿ ಮತ್ತೊಂದು ಮದುವೆಯಾಗಿದ್ದಾನೆ. ಅಲ್ಲದೆ ಸಿಕ್ಕಾಪಟ್ಟೆ ಕುಡಿದುಕೊಂಡು ಬಂದು ಮನೆಯವರಿಗೆ ಹಿಂಸೆ ನೀಡುತ್ತಾನೆ ಎನ್ನುತ್ತಾರೆ.