ಬಿಜೆಪಿಯ ಕೆಲವು ಹಿರಿಯ ನಾಯಕರು ಕಚ್ಚಾಟದಲ್ಲಿ ತೊಡಗಿರುವುದು ನನಗೆ ತೀವ್ರ ನೋವು ತರುತ್ತಿದೆ ಎಂದು ಪಕ್ಷದಲ್ಲಿನ ಆಂತರಿಕ ಸಂಘರ್ಷಗಳ ಕುರಿತು ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
ಇಬ್ಬರು ದೊಡ್ಡ ವ್ಯಕ್ತಿಗಳು ಅಹಂ ಸಂಘರ್ಷದಲ್ಲಿ ತೊಡಗಿರುವುದನ್ನು ನೋಡಿದಾಗ ನನಗೆ ತೀವ್ರವಾಗಿ ನೋವಾಗುತ್ತದೆ. ಆಗ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತೇನೆ ಎಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಏರ್ಪಡಿಸಿರುವ 'ದಕ್ಷ ಆಡಳಿತ' ಕುರಿತ ಸಮ್ಮೇಳನದಲ್ಲಿ ಅವರು ತಿಳಿಸಿದರು.
ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ನಾಯಕತ್ವದಡಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪಕ್ಷವು ಒಳಜಗಳದ ತಾರಕದಲ್ಲಿರುವ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗಡ್ಕರಿ ಕರೆ ನೀಡಿದ್ದಾರೆ.
ರಾಷ್ಟ್ರೀಯತೆ ಎನ್ನುವುದು ಬಿಜೆಪಿಯ ಪ್ರೇರಣೆಯಾಗಿದ್ದು, ಇದೇ ಪಕ್ಷದ ರಾಜಕೀಯ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಬಿಜೆಪಿ ಆಡಳಿತವಿರುವ ರಾಜ್ಯಗಳ 65 ಸಚಿವರುಗಳು, ಪಕ್ಷದ ಮುಖಂಡರು ಸೇರಿದಂತೆ ಸುಮಾರು 100 ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಕ್ಷ ಸಾಗಬೇಕಾದ ದಾರಿಯ ಕುರಿತು ನಿರ್ದೇಶನ ನೀಡುತ್ತಿರುವ ಪ್ರಮುಖ ವ್ಯಕ್ತಿಗಳು ಇಲ್ಲಿ ಸೇರಿದ್ದಾರೆ ಎಂದು ಹೇಳುವ ಮೂಲಕ ನಾಯಕರಲ್ಲಿ ಹುರುಪು ಹುಟ್ಟಿಸಲು ಯತ್ನಿಸಿದರು.
ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದಲ್ಲಿದ್ದರೆ, ಬಿಹಾರ, ಪಂಜಾಬ್ ಮತ್ತು ಜಾರ್ಖಂಡ್‌ಗಳಲ್ಲಿ ಮೈತ್ರಿಕೂಟದ ಸರಕಾರದಲ್ಲಿ ಪಾಲು ವಹಿಸಿಕೊಂಡಿವೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕರ್ನಾಟಕದ ಬಿ.ಎಸ್. ಯಡಿಯೂರಪ್ಪ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್, ಹಿಮಾಚಲ ಪ್ರದೇಶದ ಪಿ.ಎಸ್. ಧುಮಾಲ್, ಉತ್ತರಾಖಂಡದ ರಮೇಶ್ ಪೋಖ್ರಿಯಾಲ್ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಪಿತೃ ವಿಯೋಗದ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿಲ್ಲ.