ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೀದಿಯಲ್ಲಿ ಹುಟ್ಟಿದ ಫಾತಿಮಾ ಪುತ್ರಿಗೆ ಶಿಕ್ಷಣ ಕೊಡಿ: ಕೋರ್ಟ್ (Delhi HC | hospital | pregnancy | Fatima)
Bookmark and Share Feedback Print
 
ಗರ್ಭಿಣಿಯಾಗಿದ್ದಾಗ ಯಾವುದೇ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಮರದಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆ ಮಗುವಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸರಕಾರಗಳು ವಹಿಸಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

ಗರ್ಭಿಣಿಯಾದ ನಂತರ ಮಗುವಿಗೆ ಜನ್ಮ ನೀಡುವವರೆಗೆ 24ರ ಹರೆಯದ ಫಾತಿಮಾ ಅನುಭವಿಸಿದ್ದ ಯಾತನೆಯ ಮುಖದಲ್ಲೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನ್ಯಾಯಾಲಯ ಆದೇಶ ನೀಡಿದ ನಂತರ ನಗು ನಲಿದಾಡುತ್ತಿದೆ.

ದೆಹಲಿ ಮಹಾನಗರ ಪಾಲಿಕೆಯಿಂದ ನಡೆಸಲ್ಪಡುವ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಫಾತಿಮಾ ಹೆರಿಗೆಯಾಗುವ ಒಂದು ತಿಂಗಳ ಮೊದಲು ಭೇಟಿ ನೀಡಿ, ತನಗೆ ಸಿಗಬೇಕಿರುವ ನಗದು ಸಹಾಯದ ಕುರಿತು ವಿಚಾರಣೆ ನಡೆಸಿದ್ದಳು. ಆದರೆ ಆಸ್ಪತ್ರೆ ವತಿಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.

ಪರಿಣಾಮ 2009ರ ಮೇ 29ರಂದು ಆಕೆ ಸಾರ್ವಜನಿಕ ಸ್ಥಳದಲ್ಲಿದ್ದ ಮರವೊಂದರ ಕೆಳಗೆ ಕಲ್ಲು ಚಪ್ಪಡಿಯ ಮೇಲೆ ಯಾವುದೇ ವೈದ್ಯಕೀಯ ವ್ಯವಸ್ಥೆಯಿಲ್ಲದೆ ಮಗುವಿಗೆ ಜನ್ಮ ನೀಡಿದ್ದಳು.

ಇದೀಗ ನ್ಯಾಯಾಲಯ ತನ್ನ ಪರವಾಗಿ ತೀರ್ಪು ನೀಡಿರುವುದರಿಂದ ಫಾತಿಮಾ ಸಂತಸಗೊಂಡಿದ್ದಾಳೆ. ನ್ಯಾಯಾಲಯದ ಆದೇಶ ಸಂಪೂರ್ಣವಾಗಿ ಸರಿಯಾಗಿದೆ ಎಂದಿದ್ದಾಳೆ.

ತನಗಾದ ಅನ್ಯಾಯದ ವಿರುದ್ಧ ಫಾತಿಮಾ ಮಾನವ ಹಕ್ಕುಗಳ ಸಂಘಟನೆಗಳ ನೆರವಿನಿಂದ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಜನನಿ ಸುರಕ್ಷಾ ಯೋಜನೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಹೆರಿಗೆ ಯೋಜನೆ ಸೇರಿದಂತೆ ಹಲವು ಯೋಜನೆಗಳ ಪ್ರಕಾರ ಸಿಗಬೇಕಿದ್ದ ಸೌಲಭ್ಯಗಳಿಂದ ತನ್ನನ್ನು ವಂಚಿತಗೊಳಿಸಲಾಗಿದೆ ಎಂದು ಆಕೆ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಳು.

ಆಕೆಗೆ ಯೋಜನೆಗಳಿಂದ ಸಿಗಬೇಕಾಗಿರುವ ಸೂಕ್ತ ಸವಲತ್ತುಗಳನ್ನು ತಕ್ಷಣವೇ ಸರಕಾರ ಒದಗಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ ಎಂದು ವಕೀಲೆ ದಿವ್ಯಾ ಜ್ಯೋತಿ ತಿಳಿಸಿದ್ದಾರೆ.

ಫಾತಿಮಾ ಪುತ್ರಿ ಆಲಿಷಾ ಪ್ರೌಢ ಶಿಕ್ಷಣ ಮುಕ್ತಾಯವಾಗುವವರೆಗೆ ಸರಕಾರ ಆಕೆಯ ಶೈಕ್ಷಣಿಕ ವೆಚ್ಚವನ್ನು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ತೀರ್ಪು ನೀಡಿರುವುದು ಈಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಮಗುವಿಗೆ ದೊಡ್ಡ ಉಡುಗೊರೆಯಾಗಿ ಪರಿಣಮಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ