ಸೋನಿಯಾ 'ಕೆಂಪು ಸೀರೆ'; ಕೊತ ಕೊತ ಕುದಿಯುತ್ತಿದೆ ಕಾಂಗ್ರೆಸ್
ನವದೆಹಲಿ, ಸೋಮವಾರ, 7 ಜೂನ್ 2010( 12:36 IST )
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಜೀವನದ ಬಹಿರಂಗವಾಗದ ಹಲವು ಸತ್ಯಗಳನ್ನು ಹೊಂದಿದೆ ಎಂದು ಹೇಳಲಾಗಿರುವ ಸ್ಪಾನಿಷ್ ಲೇಖಕ ಜವೇರ್ ಮೋರೋ ಬರೆದಿರುವ 'ದಿ ರೆಡ್ ಸಾರಿ' ಎಂಬ ಪುಸ್ತಕದ ವಿರುದ್ಧ ಕಾಂಗ್ರೆಸ್ ಇದೀಗ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪುಸ್ತಕ ಭಾರತದಲ್ಲಿ ಬಿಡುಗಡೆಯಾಗದಂತೆ ತಡೆಯಲು ಹರಸಾಹಸ ಪಡುತ್ತಿದೆ.
ಮೋರೋ ಪುಸ್ತಕದಲ್ಲಿ ಸೋನಿಯಾ ಗಾಂಧಿ ಬಗ್ಗೆ ಕಪೋಲಕಲ್ಪಿತವಾಗಿ ಬರೆಯಲಾಗಿದೆ, ಅದರಲ್ಲಿರುವ ವಿಚಾರಗಳು ನಿಜವಾದುದಲ್ಲ ಎನ್ನುವುದು ಕಾಂಗ್ರೆಸ್ ವಾದ. ಇದೇ ಹಿನ್ನೆಲೆಯಲ್ಲಿ ಲೇಖಕರಿಗೆ ಲೀಗಲ್ ನೋಟೀಸ್ ನೀಡಲಾಗಿದೆ.
PR
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜತೆಗಿನ ಸೋನಿಯಾ ವಿವಾಹ, ಅದಕ್ಕೂ ಮೊದಲಿನ ಸೋನಿಯಾ ಜೀವನ, ಗಂಡನ ಹತ್ಯೆಯ ಬಳಿಕ ಸೋನಿಯಾ ಅನುಸರಿಸಿದ ಮಾರ್ಗ ಮತ್ತು ಎದುರಿಸಿದ ಕಷ್ಟಗಳ ಕುರಿತ ಸಮಗ್ರ ವಿವರಣೆ 'ರೆಡ್ ಸಾರಿ'ಯಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಆಂಗ್ಲ ಆವೃತ್ತಿಯ ಮೂಲ ಸ್ಪಾನಿಷ್ ಭಾಷೆಯ 'ಎಲ್ ಸಾರಿ ರೋಜೋ'. ಈ ಪುಸ್ತಕ 2008ರಲ್ಲೇ ಸ್ಪೇನ್‌ನಲ್ಲಿ ಬಿಡುಗಡೆಯಾಗಿತ್ತು. ನಂತರ ಫ್ರೆಂಚ್ ಮತ್ತು ಡಚ್ ಭಾಷೆಗಳಿಗೆ ಅನುವಾದಗೊಂಡಿದೆ. ಇದೀಗ ಭಾರತದಲ್ಲಿ 'ದಿ ರೆಡ್ ಸಾರಿ' ಎಂಬ ಹೆಸರಿನಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.
ಭಾರತ ತೊರೆಯಲು ನಿರ್ಧರಿಸಿದ್ದ ಸೋನಿಯಾ... 1977ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ರಾಜಕೀಯದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ಹೆದರಿದ್ದ ಸೋನಿಯಾ ಗಾಂಧಿ ತನ್ನ ಮಕ್ಕಳ ಜತೆ ಇಟಲಿಗೆ ಮರಳಲು ನಿರ್ಧರಿಸಿದ್ದರು.
ತನ್ನ ಮಕ್ಕಳ ಜೀವನಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎನ್ನುವುದು ಸೋನಿಯಾ ಇಚ್ಛೆಯಾಗಿತ್ತು. ಆದರೆ ಇಂದಿರಾ ಗಾಂಧಿಯವರ ಒತ್ತಾಯಕ್ಕೆ ಮಣಿದಿದ್ದ ಸೋನಿಯಾ, ತನ್ನ ಮಕ್ಕಳನ್ನು ಯೂರೋಪ್‌ಗೆ ಕಳುಹಿಸಿ ತಾನು ಭಾರತದಲ್ಲೇ ಉಳಿದುಕೊಂಡಿದ್ದರು.
ಈ ಲೇಖಕರ ಪ್ರಕಾರ, ಸೋನಿಯಾ ಇಟಲಿಗೆ ಮರಳಲು ಹೊರಟು ನಿಂತಿದ್ದರು. ಆದರೆ ಇದರಿಂದ ತೀವ್ರ ವಿಚಲಿತರಾದ ಇಂದಿರಾ, ನೀನು ತವರಿಗೆ ಮರಳಿದ್ದೇ ಆದಲ್ಲಿ ಅದು ಟೀಕಾಕಾರರಿಗೆ ಆಹಾರವಾಗುತ್ತದೆ; ಅದಕ್ಕೆ ಅವಕಾಶ ನೀಡಬೇಡ. ನಿನ್ನ ಇಂಗಿತವನ್ನು ನಾನು ಅರಿಯಬಲ್ಲೆ. ಅನಗತ್ಯ ಟೀಕೆಗಳನ್ನು ಆಹ್ವಾನಿಸುವುದು ಎಷ್ಟು ಸರಿ ಎಂದೆಲ್ಲ ಹೇಳಿ ಸೋನಿಯಾ ಮನವೊಲಿಸಿದ್ದರು.
ಭಾರತದ ಹೆಸರೇ ಕೇಳಿರಲಿಲ್ಲ... ಎಡ್ವಿಜ್ ಅಂಟೋನಿಯಾ ಅಲ್ಬಿನಾ ಮೈನೋ ಆಗಿದ್ದ ಸೋನಿಯಾ ತನ್ನ ಬಾಲ್ಯದಲ್ಲಿ ಅಂದರೆ ಶಾಲಾ ದಿನಗಳಲ್ಲಿ ಭಾರತದ (ಇಂಡಿಯಾ) ಹೆಸರನ್ನೇ ಕೇಳಿರಲಿಲ್ಲ. ಆಕೆಯ ಕನಸು ಸ್ಟೀವರ್ಡ್ ಆಗಬೇಕೆಂಬುದಾಗಿತ್ತು. ಪಕ್ಕಾ ಫ್ಯಾಷನ್ ಪ್ರಿಯ ಮನಸ್ಸು ಮೈನೋದ್ದಾಗಿತ್ತು.
ಆದರೆ ಆಕೆಯ ಜೀವನಕ್ಕೆ ಮಹತ್ವದ ತಿರುವು ದೊರೆತದ್ದು ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ. ಅದೇ ವಿವಿಯಲ್ಲಿ ರಾಜೀವ್ ಗಾಂಧಿ ಕೂಡ ಓದುತ್ತಿದ್ದರು. ಸ್ನೇಹ ಸಂಬಂಧವು ಪ್ರೀತಿಯಾಗಿ ಬೆಳೆದು ಮದುವೆಯವರೆಗೂ ಮುಂದುವರಿಯಿತು. ಈ ಹಂತದಲ್ಲಿ ಭಾರತದ ಬಗ್ಗೆ ಸೋನಿಯಾ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವಂತಾಯಿತು.
ಮದುವೆಯ ನಂತರ ಅನಿವಾರ್ಯವಾಗಿ ಭಾರತಕ್ಕೆ ಸೋನಿಯಾ ಬಂದಿದ್ದರು. ತಾನು ಇಟಲಿ ತೊರೆಯುತ್ತೇನೆ ಎಂಬುದನ್ನು ಆಕೆ ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ ಎಂದು ಮೋರೋ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ.
ಹಿಂದೂ ಸಂಸ್ಕೃತಿ ಧಿಕ್ಕರಿಸಿದ್ದರು... ಎಲ್‌ಟಿಟಿಇ ಉಗ್ರರ ದಾಳಿಗೆ ಬಲಿಯಾದ ರಾಜೀವ್ ಗಾಂಧಿ ಶವ ಸಂಸ್ಕಾರ ಸಂದರ್ಭದಲ್ಲಿ ಸೋನಿಯಾ ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ನಡೆದುಕೊಂಡಿರಲಿಲ್ಲ.
ಶವ ಸಂಸ್ಕಾರದ ಸಂದರ್ಭದಲ್ಲಿ ಪತ್ನಿಯಾದವಳು ಸ್ಥಳಕ್ಕೆ ಬರಬಾರದು ಎಂದಿದ್ದರೂ, ಅದನ್ನು ಧಿಕ್ಕರಿಸಿದ್ದ ಸೋನಿಯಾ ನಿರಾಳವಾಗಿ ರಾಜೀವ್ ಶವ ಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಡೆಯಾದದ್ದು ಗಾಂಧಿ ರಾಜಕೀಯ... ರಾಜೀವ್ ಗಾಂಧಿ ಸಾವಿನ ನಂತರ ಸೋನಿಯಾ ನೇರವಾಗಿ ಇಟಲಿಗೆ ಮರಳುವವರಿದ್ದರು. ಆದರೆ ಆಕೆಯನ್ನು ತಡೆದದ್ದು ಕಾಂಗ್ರೆಸ್ಸಿಗರ ಗಾಂಧಿ ಕುಟುಂಬ ರಾಜಕೀಯ. ತನಗೆ ರಾಜಕೀಯ ಇಚ್ಛೆಯಿಲ್ಲದಿದ್ದರೂ, ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಣಿದು ಸೋನಿಯಾ ಭಾರತದಲ್ಲೇ ಉಳಿದುಕೊಂಡರು ಎಂದು ಮೋರೋ ತನ್ನ ಕೃತಿಯಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ.
ತನ್ನ ಅತ್ತೆ ಮತ್ತು ಗಂಡ ಇಬ್ಬರೂ ಬಲಿಯಾದದ್ದು ಭಾರತದ ರಾಜಕಾರಣಕ್ಕೆ. ಹಾಗಾಗಿ ತಾನು ಭಾರತದ ರಾಜಕಾರಣದಲ್ಲಿ ಯಾವುದೇ ಪಾತ್ರವಹಿಸುವ ಬಗ್ಗೆ ಸೋನಿಯಾ ಎಳ್ಳಷ್ಟೂ ಒಲವನ್ನು ಹೊಂದಿರಲಿಲ್ಲ ಎಂಬಂತಹ ಹಲವು ಅಂಶಗಳನ್ನು ಮೋರೋ ನಮೂದಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇದೀಗ ಪುಸ್ತಕ ಬಿಡುಗಡೆಗೆ ತಡೆಯೊಡ್ಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋರೋ ಬರೆದಿರುವುದು ಕಟ್ಟುಕಥೆ... ಹೀಗೆಂದು ಹೇಳುತ್ತಿರುವವರು ಕಾಂಗ್ರೆಸ್ ವಕ್ತಾರ ಹಾಗೂ ಸೋನಿಯಾ ಗಾಂಧಿ ವಕೀಲ ಅಭಿಷೇಕ್ ಸಿಂಘ್ವಿ. ತಾನು ರೆಡ್ ಸಾರಿ ಪುಸ್ತಕದ ಲೇಖಕ ಮೋರೋ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಅತ್ತ ಮೋರೋ ಕೂಡ ಸುಮ್ಮನೆ ಕುಳಿತಿಲ್ಲ. ಅಭಿಷೇಕ್ ಸಿಂಘ್ವಿಯವರು ತನ್ನ ಪುಸ್ತಕದ ಪ್ರಕಾಶಕರಿಗೆ ಭಯ ಹುಟ್ಟಿಸುತ್ತಿದ್ದಾರೆ. ಅವರ ವಿರುದ್ಧ ತಾನು ದಾವೆ ಹೂಡುತ್ತೇನೆ ಎಂದು ಲೇಖಕರು ತಿಳಿಸಿದ್ದಾರೆ.
ನನ್ನ ಪುಸ್ತಕದ ಆಂಗ್ಲ ಆವೃತ್ತಿ ಇನ್ನೂ ಮಾರುಕಟ್ಟೆಗೇ ಬಂದಿಲ್ಲ. ಹಾಗಿದ್ದೂ ಅವರು ಅನುವಾದಿತ ಭಾಗವನ್ನು ಹೇಗೆ ಪಡೆದುಕೊಂಡಿದ್ದಾರೆ ಎಂದು ತಿಳಿದಿಲ್ಲ. ಬಹುಶಃ ಅಕ್ರಮವಾಗಿ ಗಳಿಸಿಕೊಂಡಿದ್ದಾರೆ. ಹಾಗಾಗಿ ಸಿಂಘ್ವಿ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಮೋರೋ ಸ್ಪಷ್ಟಪಡಿಸಿದ್ದಾರೆ.