ಶರದ್ ಪವಾರ್ ವಿರುದ್ದ ಕ್ರಮ ಕೈಗೊಳ್ಳಿ: ಪ್ರಧಾನಿಗೆ ಬಿಜೆಪಿ
ಉತ್ತಾನ್, ಸೋಮವಾರ, 7 ಜೂನ್ 2010( 13:55 IST )
ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಐಪಿಎಲ್ ಬಿಡ್ಡಿಂಗ್ ವಿವಾದಕ್ಕೆ ಸಂಬಂಧಪಟ್ಟಂತೆ ವಾಸ್ತವಾಂಶಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಪವಾರ್ ರಾಜೀನಾಮೆ ನೀಡಲು ನಿರಾಕರಿಸಿದರೆ, ಅವರ ವಿರುದ್ಧ ಪ್ರಧಾನಿ ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿಯವರು ಯಾವತ್ತೂ ಪ್ರಾಮಾಣಿಕ ಆಡಳಿತದ ಕುರಿತು ಮಾತನಾಡುತ್ತಾ ಬಂದವರು. ಈ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ಕ್ರಮವನ್ನು ಆಧರಿಸಿ ನಾವು ನಿಮ್ಮ ವ್ಯಕ್ತಿತ್ವವನ್ನು ನಿರ್ಣಯಿಸುತ್ತೇವೆ ಎಂದು ಮಹಾರಾಷ್ಟ್ರದಲ್ಲಿ ನಡೆದ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಎರಡು ದಿನಗಳ ಸಮ್ಮೇಳನದ ನಂತರ ಮಾತನಾಡುತ್ತಾ ಪಕ್ಷದ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಇತ್ತ ಹೈದರಾಬಾದ್‌ನಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಪವಾರ್ ರಾಜೀನಾಮೆ ನೀಡಲೇಬೇಕು ಎಂದಿದ್ದಾರೆ.
ಈ ವಿಚಾರದ ಕುರಿತು ಬಿಜೆಪಿ ವಕ್ತಾರರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದು ಪಕ್ಷದ ನಿಲುವು. ಅದಕ್ಕಿಂತ ಹೆಚ್ಚು ಮಾತನಾಡಿ ನಿಮಗೆ ಸುದ್ದಿ ನೀಡುವ ಬಯಕೆ ನನಗಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.
ಪವಾರ್ ರಾಜೀನಾಮೆಯಿಲ್ಲ: ಎನ್‌ಸಿಪಿ ಐಪಿಎಲ್ ವಿವಾದಕ್ಕೆ ಸಂಬಂಧಪಟ್ಟಂತೆ ಪವಾರ್ ರಾಜೀನಾಮೆ ನೀಡುವುದಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸ್ಪಷ್ಟಪಡಿಸಿದೆ.
ಸಿಟಿ ಕಾರ್ಪೊರೇಷನ್‌ನಲ್ಲಿ ಪವಾರ್ ಕುಟುಂಬವು ಕಡಿಮೆ ಪ್ರಮಾಣದ ಶೇರು ಹೊಂದಿರುವುದರಿಂದ ಇಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪವಾರ್ ಕುಟುಂಬದ ಪಾತ್ರ ಕಡಿಮೆಯಿರುತ್ತದೆ. ಹಾಗಾಗಿ ಇಲ್ಲಿ ಅವರು ತಪ್ಪೆಸಗಿದ್ದಾರೆ ಎಂಬ ಪ್ರಶ್ನೆಗಳೇ ಉದ್ಭವಿಸುವುದಿಲ್ಲ ಎಂದು ಎನ್‌ಸಿಪಿ ವಕ್ತಾರ ಡಿ.ಪಿ. ತ್ರಿಪಾಠಿ ತಿಳಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥರನ್ನು ಸಮರ್ಥಿಸಿಕೊಂಡಿರುವ ತ್ರಿಪಾಠಿ, ಇದುವರೆಗೂ ಪ್ರಧಾನ ಮಂತ್ರಿ ಅಥವಾ ಯುಪಿಎ ಮುಖ್ಯಸ್ಥರು ಐಪಿಎಲ್ ವಿವಾದದ ಕುರಿತು ಪವಾರ್ ಅವರ ಜತೆ ಯಾವುದೇ ಚರ್ಚೆ ನಡೆಸಿಲ್ಲ ಎಂದರು. ಪಕ್ಷಕ್ಕಾಗಿರುವ ಧಕ್ಕೆಯನ್ನು ಎನ್‌ಸಿಪಿ ಸರಿಪಡಿಸಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ, ಧಕ್ಕೆಯೇ ಆಗಿಲ್ಲದಿರುವುದರಿಂದ ಆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.