ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಸ್ಪತ್ರೆ ಆವಾಂತರದಿಂದ ಬದಲಾದ ಹೆಣ್ಮಗು ಈಗ ಅನಾಥ! (Baby | Ramila Chunara | Ramila Damor | Gujarat)
Bookmark and Share Feedback Print
 
ಸಿನಿಮಾ ಕಥೆಯೊಂದು ನಿಜ ಜೀವನದಲ್ಲಿ ನಡೆದು ಹೋದಂತಿದೆ ಇದು. ಇಬ್ಬರು ಮಹಿಳೆಯರು ಜನ್ಮ ನೀಡಿದ ಗಂಡು ಮತ್ತು ಹೆಣ್ಣು ಮಗು ಆಸ್ಪತ್ರೆಯವರ ಪ್ರಮಾದದಿಂದಾಗಿ ಅದಲು ಬದಲಾಗಿತ್ತು. ಈಗ ಇಬ್ಬರೂ ತಾಯಂದಿರು ಗಂಡು ಮಗುವಿಗಾಗಿ ಕಿತ್ತಾಡುತ್ತಿದ್ದಾರೆ. ಈ ಎರಡು ಮಹಿಳೆಯರ ಜಗಳದಲ್ಲಿ ಹೆಣ್ಮಗು ಬಡವಾಗುತ್ತಿದೆ.

ಗುಜರಾತಿನ ವಡೋದರದ ಎಸ್ಎಸ್‌ಜಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದು. ರಮೀಲಾ ಎಂಬ ಒಂದೇ ಹೆಸರಿನ ಇಬ್ಬರು ಮಹಿಳೆಯರು ಗುರುವಾರ ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದರು.

ಇವರಲ್ಲಿ ರಮೀಲಾ ಚುನಾರಾ ಎಂಬವಳು ವಡೋದರದ ಮಂಜಲಾಪುರದವಳು. ರಮೀಲಾ ದಾಮೋರ್ ಎಂಬಾಕೆ ಲಿಂಖೆಡಾ ಪ್ರದೇಶದವಳು. ಚುನಾರಾ ಹೆಣ್ಮಗುವಿಗೆ ಜನ್ಮ ನೀಡಿದ್ದರೆ, ದಾಮೋರ್ ಗಂಡು ಮಗುವನ್ನು ಹೆತ್ತಿದ್ದಳು.

ಆದರೆ ಆಸ್ಪತ್ರೆ ಸಿಬ್ಬಂದಿಯ ಆವಾಂತರದಿಂದ ಗಂಡು ಮಗುವನ್ನು ಚುನಾರಾ ಮತ್ತು ಹೆಣ್ಣು ಮಗುವನ್ನು ದಾಮೋರ್‌ಳಿಗೆ ಹಸ್ತಾಂತರಿಸಿದ್ದರು. ಬಳಿಕ ತಪ್ಪಿನ ಅರಿವಾಗಿ ಬದಲಾವಣೆ ಮಾಡಲು ಯತ್ನಿಸಿದಾಗ ಗಂಡು ಮಗುವನ್ನು ದಾಮೋರ್ ವಶಕ್ಕೆ ಕೊಡಲು ಚುನಾರಾ ನಿರಾಕರಿಸಿದ್ದಾಳೆ. ಹೆಣ್ಣು ಮಗುವನ್ನು ತನ್ನ ಮಗು ಎಂದು ಒಪ್ಪಿಕೊಳ್ಳಲೂ ಚುನಾರಾ ಸಿದ್ಧಳಿಲ್ಲ.

ಅತ್ತ ದಾಮೋರ್ ಪರಿಸ್ಥಿತಿಯೂ ಇದೇ ಆಗಿದೆ. ನಿಜವಾಗಿಯೂ ತನ್ನದಲ್ಲದ ಹೆಣ್ಣು ಮಗುವನ್ನು ಸ್ವೀಕರಿಸಲು ಸಿದ್ಧಳಿಲ್ಲ. ಅತ್ತ ಗಂಡು ಮಗುವನ್ನು ಚುನಾರಾ ಬಿಟ್ಟು ಕೊಡುತ್ತಿಲ್ಲ.

ಹೀಗೆಲ್ಲ ನಡೆಯಲು ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಇದೀಗ ಕುಟುಂಬಗಳು ಆರೋಪಿಸುತ್ತಿವೆ. ಆದರೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ, ತಪ್ಪು ನಡೆದಿರುವುದು ಹೌದು; ಇದಕ್ಕಿದ್ದ ಪ್ರಮುಖ ಕಾರಣಗಳು ಎರಡು. ಮೊದಲನೆಯದಾಗಿ ಇಬ್ಬರ ಹೆಸರುಗಳೂ ಒಂದೇ ಆಗಿದ್ದುದು. ಇಬ್ಬರೂ ಅಕ್ಕ-ಪಕ್ಕದ ಬೆಡ್‌ನಲ್ಲಿದ್ದುದು ಮತ್ತೊಂದು ಕಾರಣ ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಬಿ. ಪಟೇಲ್ ತಿಳಿಸಿದ್ದಾರೆ.

ಕಾರಣಗಳೇನೇ ಇರಬಹುದು, ಆದರೆ ಇಬ್ಬರು ತಾಯಂದಿರ ಗಲಾಟೆಯಲ್ಲಿ ಹೆಣ್ಣು ಮಗುವೊಂದು ಅನಾಥವಾಗುತ್ತಿರುವುದಂತೂ ನಿಜ.
ಸಂಬಂಧಿತ ಮಾಹಿತಿ ಹುಡುಕಿ