ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಜಾತಶತ್ರು ಎಂದು ಬಣ್ಣಿಸಿರುವ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ, ಅವರು ನನ್ನ ರಾಜಕೀಯ ಹೀರೋ ಎಂದು ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಗಾಗಿ ಜೇಠ್ಮಲಾನಿ ಪ್ರಸಕ್ತ ರಾಜಸ್ತಾನದಿಂದ ಬಿಜೆಪಿ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಾಜಪೇಯಿಯವರನ್ನು ಮುಕ್ತಕಂಠದಿಂದ ಹೊಗಳಿದರು.
PTI
ನಾನೀಗ ವಿಧ್ಯುಕ್ತವಾಗಿ ಬಿಜೆಪಿಗೆ ಮರಳಿದ್ದೇನೆ. ನನ್ನ ರಾಜಕೀಯ ಹೀರೋ ಮತ್ತು ರಾಜಕೀಯ ಮುತ್ಸದ್ದಿ ವಾಜಪೇಯಿಯವರ ಆಶೀರ್ವಾದದೊಂದಿಗೆ ನಾನು ವಾಪಸ್ ಬಂದಿದ್ದೇನೆ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಮ್ಮ ಗೆಳೆತನದಲ್ಲಿ ಯಾವುದೇ ಭಿನ್ನಮತಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಹಲವು ವಿಚಾರಗಳಲ್ಲಿ ಬಿಜೆಪಿಯ ವಿರುದ್ಧ ಕತ್ತಿ ಮಸೆದಿದ್ದ ಜೇಠ್ಮಲಾನಿ, ಇದೀಗ ಬಿಜೆಪಿ ಬೆಂಬಲದಿಂದ ರಾಜ್ಯಸಭಾ ಚುನಾವಣೆ ಕಣಕ್ಕಿಳಿಯುತ್ತಿದ್ದಂತೆ ಪಕ್ಷದ ಪರವಾಗಿ ಮಾತನಾಡಿದ್ದಾರೆ.
ಪ್ರಸಕ್ತ ಬಡತನ, ಭಯೋತ್ಪಾದನೆ, ನೆರೆರಾಷ್ಟ್ರಗಳ ಜತೆಗಿನ ಸಮಸ್ಯೆಗಳ ಪರಿಹಾರ ಮತ್ತು ನೀರಿನ ಸಮಸ್ಯೆಗಳೇ ನಮ್ಮನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು. ಇವೆಲ್ಲ ವಿಚಾರಗಳ ಕುರಿತು ನಾನು ಗಮನ ಹರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾಗ ಸಂಸತ್ ದಾಳಿ ಉಗ್ರ ಅಫ್ಜಲ್ ಗುರುವಿನ ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಬೇಕು ಎಂದು ಒತ್ತಾಯಿಸಿದ್ದ ಜೇಠ್ಮಲಾನಿ ಇಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಅಫ್ಜಲ್ ಗುರು ಒಬ್ಬ ಭಯೋತ್ಪಾದಕ ಮತ್ತು ಅಂತಹ ಆತ್ಮಹತ್ಯಾ ಬಾಂಬರುಗಳಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದಾರೆ.
ವಾಜಪೇಯಿ ವಿರುದ್ಧ ಸ್ಪರ್ಧಿಸಿದ್ದರು... 87ರ ಹರೆಯದ ಜೇಠ್ಮಲಾನಿಯವರ ನಾಮಕರಣಕ್ಕೆ ಎಲ್.ಕೆ. ಅಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಬೆಂಬಲ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿಯವರಿಗೆ, 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿಯವರಿಗೆ ಜೇಠ್ಮಲಾನಿ ಸಲಹೆಗಳನ್ನು ನೀಡಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಆದರೂ ಜೇಠ್ಮಲಾನಿಯವರನ್ನು ಬಿಜೆಪಿಯಿಂದ ನಾಮಕರಣಗೊಳಿಸುವುದನ್ನು ಪಕ್ಷದ ಹಲವರು ವಿರೋಧಿಸಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿಯವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೇಠ್ಮಲಾನಿಯವರನ್ನು ಆಯ್ಕೆಗೊಳಿಸಬಾರದು ಎಂದು ಒತ್ತಾಯಿಸಲಾಗಿತ್ತು. ಇದಕ್ಕಿದ್ದ ಮತ್ತೊಂದು ಕಾರಣ ಆ ಸಂದರ್ಭದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಜೇಠ್ಮಲಾನಿಯವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದು.
ದೇವೇಗೌಡರ ಸಂಯುಕ್ತ ರಂಗ ಮತ್ತು ಎನ್‌ಡಿಎ ಸರಕಾರಗಳಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಜೇಠ್ಮಲಾನಿ, ವಾಜಪೇಯಿ ಸರಕಾರದಿಂದ 2000ದಲ್ಲಿ ಹೊರ ನಡೆದಿದ್ದರು.