ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆಯವರು ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ಲಂಕಾ ತಮಿಳರ ಪರ ಪಕ್ಷಗಳಾದ ಎಂಡಿಎಂಕೆ, ಸಿಪಿಐ ಮತ್ತು ವಿಸಿಕೆ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ವೈಕೋ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬರುತ್ತಿರುವ ರಾಜಪಕ್ಷೆಯವರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಇತರರ ಜತೆ ಮಾತುಕತೆ ನಡೆಸಲಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ವಿದುತಲೈ ಸಿರುತೈಗಲ್ ಕಚ್ಚಿ ಮುಖಂಡ ತೂಲ್ ತಿರುಮಾವಲನ್, ಸಿಪಿಐ ರಾಜ್ಯ ಕಾರ್ಯದರ್ಶಿ ಡಿ. ಪಾಂಡ್ಯನ್, ತಮಿಳು ರಾಷ್ಟ್ರೀಯರ ಚಳುವಳಿ ನಾಯಕ ಪಿ. ನೆಡುಮಾರನ್, ನಟರಾದ ಸೀಮಾನ್ ಮತ್ತು ಟಿ. ರಾಜೇಂದರ್ ಮುಂತಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಲ್‌ಟಿಟಿಇ ಪರ ನಿಲುವನ್ನು ಪ್ರತಿಪಾದಿಸುತ್ತಾ ಬಂದಿರುವ ಎಂಡಿಎಂಕೆ, ಸಿಪಿಐ ಸೇರಿದಂತೆ ಹಲವು ತಮಿಳು ಪರ ಪಕ್ಷಗಳು ಒಟ್ಟು ಸೇರಿ ಸ್ಥಾಪಿಸಿರುವ 'ಶ್ರೀಲಂಕನ್ ತಮಿಳ್ಸ್ ಮೂವ್‌ಮೆಂಟ್' ಸಂಘಟನೆಯ ಪರವಾಗಿ ಚೆನ್ನೈಯ ನಾಗೇಶ್ವರ ರಾವ್ ಪಾರ್ಕ್ ಬಳಿ ಕಪ್ಪು ಬಾವುಟ ಹಿಡಿದು ಶ್ರೀಲಂಕಾ ರಾಯಭಾರ ಕಚೇರಿಯತ್ತ ರ‌್ಯಾಲಿ ನಡೆಸಿದ ನಂತರ ಅದರ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಶ್ರೀಲಂಕಾ ಪಡೆಗಳು ಮತ್ತು ಎಲ್‌ಟಿಟಿಇ ನಡುವಿನ ಯುದ್ಧದ ಸಂದರ್ಭ ಮತ್ತು ನಂತರ ಸಾವಿರಾರು ಅಲ್ಪಸಂಖ್ಯಾತ ತಮಿಳು ನಾಗರಿಕರನ್ನು ಕೊಂದು ಹಾಕಲಾಗಿದೆ. ಈ ಸಾವಿರಾರು ಮುಗ್ಧ ತಮಿಳರ ಹತ್ಯೆಗೆ ರಾಜಪಕ್ಷೆಯವರೇ ಜವಾಬ್ದಾರರು. ಅವರನ್ನು ಅಂತಾರಾಷ್ಟ್ರೀಯ ಕಾನೂನಿನಂತೆ ವಿಚಾರಣೆ ನಡೆಸಬೇಕು ಎಂದು ವೈಕೋ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಭಾರತ ನೀಡಿರುವ ಆರ್ಥಿಕ ಸಹಾಯವನ್ನು ಶ್ರೀಲಂಕಾ ಸರಕಾರವು ತಮಿಳರ ಪುನರ್ವಸತಿಗಾಗಿ ಬಳಸುತ್ತಿಲ್ಲ ಎಂದು ವಿಸಿಕೆ ಮುಖ್ಯಸ್ಥ ತೂಲ್ ತಿರುಮಾವಲನ್ ಆರೋಪಿಸಿದ್ದು, ರಾಜಪಕ್ಷೆಯವರ ಭಾರತ ಭೇಟಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.