ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೆಹರೂ ಯೋಗ್ಯತೆ ದಲಿತ ವಿರೋಧಿ ಮೋದಿಗಿಲ್ಲ: ಕಾಂಗ್ರೆಸ್ (anti-Dalit | Congress | Gujarat | Narendra Modi)
Bookmark and Share Feedback Print
 
ಜವಾಹರ್‌ಲಾಲ್ ನೆಹರೂ ವಿರುದ್ಧ ಟೀಕಿಸಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಹಕ್ಕಿಲ್ಲ ಎಂದಿರುವ ಕಾಂಗ್ರೆಸ್, ಮೋದಿ ಸರಕಾರ ದಲಿತ ವಿರೋಧಿ ಎಂದು ಜರೆದಿದೆ.

ಒಂದು ಕಡೆಯಿಂದ ಕೇಂದ್ರದ ಯುಪಿಎ ಸರಕಾರವು ದಲಿತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿದೆ, ಇತ್ತ ಮತ್ತೊಂದು ಕಡೆಯಲ್ಲಿ ರಾಜ್ಯದ ಬಿಜೆಪಿ ಸರಕಾರವು ಆ ಸಮುದಾಯವನ್ನು ಅಣಕಿಸುತ್ತಾ ಅವಮಾನ ಮಾಡುತ್ತಿದೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿದ್ಧಾರ್ಥ್ ಪಟೇಲ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಬರೆದಿರುವ 'ಕರ್ಮಯೋಗ' ಪುಸ್ತಕದಲ್ಲಿದ್ದಂತೆ ಗುಜರಾತ್ ಸರಕಾರವು ನಡೆದುಕೊಳ್ಳುತ್ತಿರುವುದು ಸ್ಪಷ್ಟ. ಅವರು ತನ್ನ ಪುಸ್ತಕದ 48ನೇ ಪುಟದಲ್ಲಿ ಅಪಮಾನ ಎಸಗುವ ದೃಷ್ಟಿಕೋನದಿಂದ ಜಾಡಮಾಲಿಗಳ ಕುರಿತು ಉಲ್ಲೇಖಿಸಿದ್ದಾರೆ ಎಂದು ಪಟೇಲ್ ವಾಗ್ದಾಳಿ ನಡೆಸಿದ್ದಾರೆ.

ಇದು ದಲಿತ ಸಮುದಾಯ, ನಮಗೆ ಮತ್ತು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದಂತಾಗಿದ್ದು, ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಅಲ್ಲದೆ ಅಗತ್ಯ ಬಿದ್ದರೆ ರಾಜ್ಯವ್ಯಾಪಿ ಮುಷ್ಕರ ನಡೆಸುತ್ತೇವೆ ಎಂದು ಬೆದರಿಕೆ ಹಾಕಿದರು.

ಅದೇ ಹೊತ್ತಿಗೆ ಅತ್ತ ವಿರೋಧ ಪಕ್ಷದ ನಾಯಕ ಶಕ್ತಿಸಿಂಹ್ ಗೋಹಿಲ್ ಕೂಡ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೇಲ್ಜಾತಿಯ ಜನರಿಂದ ದಲಿತರ 27 ಗ್ರಾಮಗಳು ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದರೂ ಸ್ವರ್ಣ ಮಹೋತ್ಸವ ಸಂಭ್ರಮವನ್ನಾಚರಿಸುತ್ತಾ ಮೋದಿ ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಅವರು ಬಡ ದಲಿತರ ಹಕ್ಕುಗಳನ್ನು ರಕ್ಷಿಸುತ್ತಿಲ್ಲ. ಇದು ಅವರ ದಲಿತ ವಿರೋಧಿ ನಿಲುವನ್ನು ತೋರಿಸುತ್ತಿದೆ ಎಂದು ಗುಡುಗಿದ್ದಾರೆ.

ನೆಹರೂ ಟೀಕೆಗೆ ಹಕ್ಕಿಲ್ಲ..
ಜವಾಹರ್‌ಲಾಲ್ ನೆಹರೂ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದರ ಬಗ್ಗೆ ಟೀಕಿಸಿದ್ದ ಮೋದಿ ವಿರುದ್ಧವೂ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ನೆಹರೂ ಅವರನ್ನು ಟೀಕಿಸಲು ಮೋದಿಗೆ ಯಾವುದೇ ಹಕ್ಕಿಲ್ಲ. ಅವರು 2009ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮೀಕ್ಷೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಗುರುತಿಸಿಕೊಂಡಿದ್ದ ರಾಜ್ಯದ ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಮಸ್ಯೆಗಳನ್ನು ಮೊದಲು ಬಗೆಹರಿಸಲಿ ಎಂದು ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಸಲಹೆ ಮಾಡಿದ್ದಾರೆ.

ಗುಜರಾತ್‌ನ ಶೇ.47ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಅತ್ಯುತ್ತಮ ಆಹಾರವನ್ನು ಪೂರೈಸುವುದನ್ನು ಮೋದಿ ಮೊದಲು ಮಾಡಲಿ. ನಂತರ ಉಳಿದ ವಿಚಾರಗಳತ್ತ ಗಮನ ಹರಿಸಬಹುದು ಎಂದು ಅರ್ಜುನ್ ತಿಳಿಸಿದರು.

ನೆಹರೂ ಮಕ್ಕಳ ಮೇಲೆ ಅತೀವ ಮಮತೆ, ಅಕ್ಕರೆಯನ್ನು ಹೊಂದಿದ್ದರೆಂಬ ಕಾರಣಕ್ಕೆ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನ ಎಂದು ನಾಮಕರಣ ಮಾಡಲಾಯಿತು. ಮಕ್ಕಳು ಅವರನ್ನು ನೆಹರೂ ಚಾಚಾ ಎಂದೇ ಕರೆದರು. ಇದರಿಂದಾಗಿ ನೆಹರೂ ದಯಾಳುವೆಂಬುದು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಯಿತು. ಆದರೆ ಇದರಿಂದ ಮಕ್ಕಳಿಗೆ ಏನು ಸಿಕ್ಕಿದೆ ಎಂದು ಮೋದಿ ಕೆಲ ದಿನಗಳ ಹಿಂದೆ ಪ್ರಶ್ನಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ