ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ; ಆಂಡರ್ಸನ್ ಪ್ರಕರಣ ಮುಗಿದಿಲ್ಲ: ಮೊಯ್ಲಿ (Bhopal gas tragedy | Veerappa Moily | Union Carbide | Warren Anderson)
Bookmark and Share Feedback Print
 
ಭೋಪಾಲ್ ಅನಿಲ ದುರಂತದ ಪ್ರಮುಖ ಆರೋಪಿ, 'ಯೂನಿಯನ್ ಕಾರ್ಬಿಡ್' ಮಾಜಿ ಅಧ್ಯಕ್ಷ ವಾರೆನ್ ಆಂಡರ್ಸನ್ ವಿರುದ್ಧದ ಪ್ರಕರಣಗಳನ್ನು ಕೈ ಬಿಡಲಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆಂಡರ್ಸನ್ ಹೆಸರನ್ನು ನಮೂದಿಸಲಾಗಿದೆ. ಹಾಗಾಗಿ ಅಮೆರಿಕಾ ಪ್ರಜೆಯ ಪ್ರಕರಣಗಳನ್ನು ಮುಚ್ಚಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಬಿಐ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ನ್ಯಾಯಾಲಯವು ಆರೋಪವನ್ನು ಖಚಿತಪಡಿಸಬೇಕಿತ್ತು. ಆರೋಪಗಳಿಗೆ ಅಥವಾ ಸಮನ್ಸ್‌ಗಳಿಗೆ ಉತ್ತರ ಅಥವಾ ಪ್ರತಿಕ್ರಿಯೆ ನೀಡದೇ ಇದ್ದರೆ, ವ್ಯಕ್ತಿ ತಲೆ ಮರೆಸಿಕೊಂಡಿದ್ದರೆ ಆತನನ್ನು ತಪ್ಪಿಸಿಕೊಂಡಿರುವ ಅಪರಾಧಿ ಎಂದು ಘೋಷಿಸಲಾಗುತ್ತದೆ. ಅದರ ಅರ್ಥ ಆಂಡರ್ಸನ್ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದಲ್ಲ ಎಂದು ಮೊಯ್ಲಿ ವಿವರಣೆ ನೀಡಿದರು.

ತೀರ್ಪಿನಿಂದ ತಾನು ದೊಡ್ಡ ಪಾಠವನ್ನು ಕಲಿತಿರುವುದಾಗಿ ಸೋಮವಾರ ಹೇಳಿದ್ದ ಸಚಿವರು, ಭೋಪಾಲ್ ಪ್ರಕರಣವನ್ನು ಹೈಕೋರ್ಟ್‌ನ ತ್ವರಿತ ಗತಿಯ ಪೀಠದಲ್ಲಿ ವಿಚಾರಣೆಗೊಳಪಡಿಸಲು ಸರಕಾರವು ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು.

25,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದ 1984ರ ಅನಿಲ ದುರಂತಕ್ಕೆ ಸಂಬಂಧಪಟ್ಟಂತೆ ಇತರ ಎಂಟು ಮಂದಿಗೆ ಭೋಪಾಲ್ ಜಿಲ್ಲಾ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿದ್ದು, ತಪ್ಪಿತಸ್ಥರು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ.

ಅಮೆರಿಕಾ ಮೂಲದ ಯೂನಿಯನ್ ಕಾರ್ಬಿಡ್ ಕಾರ್ಪೊರೇಷನ್ ಕಂಪನಿಯ ಅಧ್ಯಕ್ಷರಾಗಿದ್ದ ಆಂಡರ್ಸನ್ ಪ್ರಸಕ್ತ ಅಮೆರಿಕಾದಲ್ಲಿದ್ದು, ಅವರಿಗೀಗ 89 ವರ್ಷ. ಭೋಪಾಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ಬಂಧಿಸಲ್ಪಟ್ಟಿದ್ದ ಆಂಡರ್ಸನ್, ಕೆಲವೇ ಗಂಟೆಗಳಲ್ಲಿ ಬಿಡುಗಡೆಗೊಂಡು ಸರಕಾರದ ಸಹಕಾರದಿಂದ ಅಮೆರಿಕಾಕ್ಕೆ ಪರಾರಿಯಾಗಿದ್ದರು.

ಸರಕಾರಿ ಮೂಲಗಳ ಪ್ರಕಾರ ಆಂಡರ್ಸನ್ ಗಡೀಪಾರಿಗೆ ಭಾರತ ಮಾಡಿದ್ದ ಹಲವು ಮನವಿಗಳನ್ನು ಅಮೆರಿಕಾ ತನ್ನ ಕಾನೂನುಗಳನ್ನು ಮುಂದೊಡ್ಡಿ ನಿರಾಕರಿಸಿತ್ತು. ಅಮೆರಿಕಾ ಕಾನೂನುಗಳ ಪ್ರಕಾರ ವ್ಯಕ್ತಿಯೊಬ್ಬ ವೈಯಕ್ತಿಕವಾಗಿ ಘಟನೆಯೊಂದಕ್ಕೆ ಕಾರಣನಾಗಿದ್ದರೆ ಮಾತ್ರ ಗಡೀಪಾರು ಮಾಡಲು ಅವಕಾಶವಿದೆ, ಹಾಗಾಗಿ ಕಂಪನಿಯೊಂದರಿಂದ ಪ್ರಮಾದವಾಗಿದ್ದರೆ ಅದಕ್ಕೆ ಅದರ ಸಿಬ್ಬಂದಿ ಹೊಣೆಗಾರನಾಗುವುದಿಲ್ಲ ಎನ್ನುವುದು ಜಗತ್ತಿನ ದೊಡ್ಡಣ್ಣನ ವಾದ.
ಸಂಬಂಧಿತ ಮಾಹಿತಿ ಹುಡುಕಿ